Chania

ಇಂಗ್ಲಂಡಿನಲ್ಲೊಬ್ಬ ಇಂಡಿಯನ್ 

ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ)

ಒಂದು ವಾರವಾಯಿತು, ಲಂಡನ್ ಏರ್ಪೋರ್ಟಿನಲ್ಲಿ ಇಳಿದಂದಿನಿಂದ. ಲೀಡ್ಸ್ ನಗರದ ಮೇರಿ ಮಾರಿಸ್ ವಸತಿ ಗೃಹದಲ್ಲಿ ನನ್ನ ಕೋಣೆ. ಮಬ್ಬು ಬೆಳಕಿನ ಕೋಣೆ. ಮನಸ್ಸು ಹಿಂದಕ್ಕೆ ಹಿಂದಕ್ಕೆ ಹೋಗುತ್ತದೆ. ಭಾರತದ ಕಡೆಗೆ, ಧಾರವಾಡದ ಕಡೆಗೆ, ಭಂವ್ಗುಟ್ಟುವ ಜಂಬೋ ವಿಮಾನದಲ್ಲಿ ಕುಳಿತು ಮುಂಬೈಯಿಂದ ಲಂಡನ್ನಿಗೆ ಹಾರಿಬಂದ ನಾನು ಬರಿ ನಕಾಶದಲ್ಲಿ ಮಾತ್ರ ನೋಡಿದ ದೇಶಗಳ ಮೇಲೆ ಹಾಯ್ದು ಬಂದೆ. ಯುಗೋಸ್ಲಾವಿಯಾ, ಜರ್ಮನಿ, ಫ್ರಾನ್ಸ್...... ಅದೊಂದು ಕನಸು. ಆದರೆ ಅದು ಸತ್ಯವೂ ಆಗಿತ್ತು. ಆದರೆ ಆಗಬೇಕಾದಷ್ಟು ಉದ್ರೇಕ ನನಗಾಗಿರಲಿಲ್ಲ.
ಬೆಳಗಾವಿಯಿಂದ ವಿಮಾನ ಮೇಲೇರಿದಾಗ ನಾನು ಕಿಟಕಿಯ ಮೂಲಕವೇ ನೋಡುತ್ತಿದ್ದೆ. ಹೆಂಡತಿ, ಮಕ್ಕಳು, ಅವ್ವ, ಅಪ್ಪ, ತಂಗಿ, ಬಂಧು, ಬಳಗ, ಎಲ್ಲ ದುಂಡಗಿನ ಕಿಟಕಿಯಲ್ಲಿ ದೂರದ ಚಿತ್ರದಲ್ಲಿನ ನಿರ್ಜೀವ ಚಿತ್ರಗಳಂತೆ ಕಂಡರು. ಒಂದು ಕ್ಷಣ ಗಂಟಲು ತುಂಬಿ ಬಂತು. ಒಂದು ವರ್ಷಕಾಲ ಮುಖಗಳು ಬರಿ ಮನಸ್ಸಿನಲ್ಲಿ ಅಥವಾ ಕನಸಿನಲ್ಲಿ.


ವಿಮಾನ ಲಗ್ಜರಿ ಬಸ್ ಹಾಗೆ ಇತ್ತು. ೨೦-೨೫ ಜನ ಪ್ರಯಾಣಿಕರು. ಇಬ್ಬರು ವಿಮಾನ ಪರಿಚಾರಿಕೆಯರು. ಒಬ್ಬಳು ಚಂದ ಇದ್ದಳು. ಇನ್ನೊಬ್ಬಳು ಗುದಗಿ. ಚಾಕಲೇಟು ಕೊಟ್ಟು ಹೋದವರು ಬ್ರ ಅನ್ನಲಿಲ್ಲ. ಕೆಳಗೆ ನೋಡಿದರೆ ಮೋಡಗಳ ರಾಶಿ. ಅದರ ಕೆಳಗೆ ಭೂಮಿ, ಹಾದಿ, ಹಳ್ಳಗಳು ಗೆರೆ ಕೊರೆದಂತೆ. ಗೋಕಾಕರ 'ರಿಬ್ಬನ್ ರಸ್ತೆಗಳ' ನೆನಪು. ಅವರು ಇಂಥ ವಿಮಾನದಲ್ಲಿ ಕುಳಿತೇ ಕವಿತೆಯ ಮೇಲೆ ಕವಿತೆ ಬರೆದರಂತೆ. ಮಹರಾಯ
ಒಂದು ತಾಸಿನಲ್ಲಿ ಮುಂಬೈ. ನನ್ನನ್ನು ಬೀಳ್ಕೊಡಲು ಬಂದ ಧಾರವಾಡದ ಟ್ಯಾಕ್ಸಿಗಳು ಕಿತ್ತೂರ ಹತ್ತಿರ ಇರಬೇಕು. ನಾನು ಮುಂಬೈಯಲ್ಲಿದ್ದೆ.  Sun n Sand Hotel   ಯವರು ವ್ಯವಸ್ಥೆ ಮಾಡಿದ್ದ BOAC ದಲ್ಲಿ ವಸತಿ. ಅಂಥ ರೂಮಿನಲ್ಲಿ ಇಳಕೊಂಡಿದ್ದು ಜೀವನದಲ್ಲಿ ಮೊದಲ ಬಾರಿ. ಹೆದರಿ ಬಾಗಿಲು ತೆಗೆಯುತ್ತಿದ್ದೆ. ಒಂದು ಬಟನ್ನು ಒತ್ತಿದಾಗ, ಸಂಗೀತ ಶುರುವಾಯಿತು. ಗಾಬರಿಯಾದೆ. ಯಾವುದೋ ಸುಡುಗಾಡು ಇಂಗ್ಲಿಷ್ ಸಂಗೀತ.  ಸಂಜೆ  ಮುಂಬೈಯಲ್ಲಿ ಅಲ್ಲಲ್ಲಿ ಸುತ್ತಾಡಿದೆ. ಬೀಚು, ಸಮುದ್ರ-ಮುಂಬೈ ಸಮುದ್ರ ಗಂಡ ಸತ್ತವಳ ಹಾಗೆ. ಯಾವ ಶೋಭೆಯೂ ಇಲ್ಲ. ಕರಿಯ ಬಂಡೆಗಲ್ಲುಗಳು. ಅವುಗಳ ಮೇಲೆ ಗಂಡು-ಹೆಣ್ಣು, ಗಂಡು-ಹೆಣ್ಣು. ಅದೇ ನಿಜವಾದ ಜಗತ್ತು. ಕೈಗೆ ಕೈ ಹೆಣೆದಾಗ, ಕೈ ನಡುವನ್ನು ಬಳಸಿದಾಗ, ಕಿವಿ ತುಂಬ ಏನೋ ಪಿಸುಗುಟ್ಟಿದಾಗ ಮುಂಬೈಯಂಥ ಮರುಭೂಮಿಯಲ್ಲೂ ಹಸಿರು ಬೀಸಿದಂತೆ.
BOAC ಜಂಬೋ ವಿಮಾನ ರಾಕ್ಷಸನ ಹಾಗೆ. ಅದರ ಹೊಟ್ಟೆಯಲ್ಲಿ ಗುಬ್ಬಿಯ ಹಾಗೆ ಕುಳಿತಿದ್ದೆ. ಸುಮಾರು ೪೦೦ ಜನ ಪ್ರಯಾಣಿಕರು. ನೆಲದಿಂದ ೩೫ ಸಾವಿರ ಪೂಟು ಎತ್ತರಕ್ಕೆ ಮುಗಿಲು ಸೀಳುಕೊಂಡು ಹಾರುತ್ತಿತ್ತು. ಅಂತರದಲ್ಲೇ ಸುಮ್ಮನೆ ಗುರುಗುಟ್ಟುತ್ತ ನಿಂತಿದೆಯೇ ಅಂತ ಒಮ್ಮೊಮ್ಮೆ ಅನಿಸಿಕೆ. ಆದರೆ ಕ್ಷಿತಿಜದ ರೇಖೆಗಳು ಬದಲಾದಂತೆ, ಕೆಳಗೆ ಸಮುದ್ರಗಳೆಲ್ಲ ಹೊಂಡ-ಕೆರೆಗಳಾಗಿ ಹಿಂದೆ ಹಿಂದೆ ಸರಿಯುತ್ತಿದ್ದಂತೆ ಪ್ರಯಾಣದ ಕಲ್ಪನೆ ಉಂಟಾಗುತ್ತಿತ್ತು. ಕುಳಿತಲ್ಲಿಯೇ ಉಪಾಹಾರ, ಚಹಾ, ಕಾಫಿ ವಗೈರೆ. ಏನು ಕೊಟ್ಟರೋ ಎಲ್ಲಾ ತಿಂದೆ. ಹೊಟ್ಟೆ ನಿಬ್ಬರಾಗಿ ಒಮ್ಮೊಮ್ಮೆ ಗುರ್ ಅನ್ನುತ್ತಿತ್ತು.
ಸುತ್ತಲೆಲ್ಲ ಬಿಳಿಯರು. ವಿಮಾನ ಪರಿಚಾರಿಕೆಯರಲ್ಲಿ ಒಬ್ಬಳು ಭಾರತೀಯಳು. ಮುದಿ ಮೋರೆ, ಸುಕ್ಕು ತೊಗಲು, ಏರಿಳಿತಳಿಲ್ಲದ ಗಂಗಾಬಯಲು. ಅಂತೂ ಭಾರತವನ್ನು ಪ್ರತಿನಿಧಿಸಿದ್ದಳು. ನನಗೆ ಕುಂತರ ಹೆದರಿಕೆ, ನಿಂತರೆ ಹೆದರಿಕೆ. ಕುಳಿತ ಸೀಟು ಹಿಂದೆ ಒರಗಿಸುವುದು ಗೊತ್ತಿಲ್ಲ. ಎಲ್ಲ ಕೇಳಿ ತಿಳಕೊಂಡೆ. ಭೂಮಿ- ಆಕಾಶಗಳ ನಡುವೆ ನಾಚಿಕೆ ಎಲ್ಲಿಯದು
*****
ಲಂಡನ್.....ಇಷ್ಟು ದಿನ ಬರಿ ಅಕ್ಷರಗಳ ಗುಂಪಾಗಿ, ಧ್ವನಿಗಳ ಮೊತ್ತವಾಗಿ, ನಕಾಶದಲ್ಲಿನ ಚಿಕ್ಕೆಯಾಗಿದ್ದ ಲಂಡನ್ ನಗರಕ್ಕೆ ಮುಂಜಾನೆ -೨೦ಕ್ಕೆ ಬಂದಾಗ ಭಾರತದಲ್ಲಿ ಮಟಮಟ ಮಧ್ಯಾಹ್ನ...... Astor College ಎಂಬಲ್ಲಿ ನನ್ನ ವಸತಿ ವ್ಯವಸ್ಥೆ.....ಲಂಡನ್ ಜನ ಎದ್ದಿದ್ದರೋ ಇಲ್ಲವೋ, ಕಾರುಗಳು ಮಾತ್ರ ಹರಿದಾಡತೊಡಗಿದ್ದವು. ಥಂಡಿಯಲ್ಲಿ ಬಾಯಿಂದ ಹೊಗೆ ಬಿಡುತ್ತ ವಸತಿಗೃಹಕ್ಕೆ ಹೋದೆ. ದಪ್ಪನ್ನ ಹೆಣ್ಣೊಂದು ಕೊಟ್ಟ ಮೂರು ಕೀಲಿಕೈ ತಗೊಂಡು ಲಿಫ್ಟ್ ಹತ್ತಿ ೩ನೆಯ ಪ್ಲೋರಿಗೆ ಹೋದೆ. ಏನಿದೆ? ಎಲ್ಲಾ ಗೋಡೆ. ಒಂದು ಬಾಗಿಲೂ ಇಲ್ಲ. ಜೇಲಿನಲ್ಲಿ ತಂದು ಒಗೆದಂತಾಗಿತ್ತು. ಒಂದೊಂದೇ ಬಾಗಿಲು ತೆಗೆಯುತ್ತ ಮುಚ್ಚುತ್ತ ಅಭಿಮನ್ಯುವಿನಂತೆ ಒಳಹೊಕ್ಕೆ. ರೂಮು ಸಿಕ್ಕಿತು. ಅದೂ ಒಂದು ಜೇಲೇ. ಇಡೀ ಇಂಗ್ಲಂಡೇ ಒಂದು ಜೇಲಿರಬಹುದೇ ಅನಿಸಿತು. ಹೆಚ್ಚು ಮಾತಿಲ್ಲ, ಕತೆಯಿಲ್ಲ. ಬಿಗಿದುಕೊಂಡ ಮುಖ. ಮಾತುಮಾತಿಗೆ Thank you ಎಂಬ ಪ್ರತ್ಯಯ. ಅದಕ್ಕೇನೂ ಅರ್ಥವಿಲ್ಲ, ಧ್ವನಿಯಿಲ್ಲ. ಲಂಡನ್ ನಗರಕ್ಕೆ ಹೃದಯವಿಲ್ಲ ಅನಿಸಿತು
ಮಧ್ಯಾಹ್ನ ಒಬ್ಬ ಬಂದ. ಕೃಷ್ಣ ಮೆನನ್ ಹಾಗೆ ಮುಖವಿದ್ದ ಮುದುಕ. ಅವನು ಬ್ರಟಿಷ್ ಕೌನ್ಸಿಲ್ದವರು ನನಗಾಗಿ ಕಳಿಸಿದ್ದ ಗೈಡು. ಬಂದು ಆರಾಮಾಗಿ ಕುಳಿತ. ಕೋಣೆ ನೋಡಿ ಅಡವಿಯೇ ಅನಿಸಿತ್ತು. ಹೊರಬರುವಾಗ ನಾನೇ ಬಾಗಿಲು ತೆಗೆಯುತ್ತ ಬಂದೆ. ಮುದುಕನ ಗಡಿಬಿಡಿ, ಅವಸರ,  absent-mindendness ನೋಡಿ 'ಅಂತೂ ಲಂಡನ್ನಿನಲ್ಲಿ ಮನುಷ್ಯರಿದ್ದಾರೆ' ಅನಿಸಿ ಉಸಿರುಬಿಟ್ಟೆ. ಅವನು ಕರೆದಲ್ಲೆಲ್ಲ ಅವನ ಹಾಗೇ ಜೀಪುಗಾಲು ಹಾಕುತ್ತ ಅದೇನು ಇದೇನು ಅಂತ ಸಣ್ಣ ಮಕ್ಕಳ ಹಾಗೆ ಕೇಳುತ್ತ ಹುರುಪಿನಿಂದ ನಡೆದೆ, ಅವನೂ ಎಲ್ಲಾ ಬಿಡಿಬಿಡಿಸಿ ಕತೆ ಹೇಳುವಂತೆ ಹೇಳಿದ. ಟ್ಯೂಬ್ನಲ್ಲಿ ಕುಳಿತು  British Council ಇದ್ದ ಜಾಗಕ್ಕೆ ಬಂದೆವು. ಜಾರುವ ಮೆಟ್ಟಿಲು ಸಿನೆಮಾದಲ್ಲಿ ಮಾತ್ರ ನೋಡಿದ್ದೆ! - ಮಜಾ ಅನಿಸಿತು.


ಕ್ರಿಸ್ಟಿನ್ ಲಾರ್ಗನ್ : ಅವಳ ನಗೆ, ಮಾತು, ಆತ್ಮೀಯತೆ ನೆನೆದಾಗ ಈಗಲೂ ಥಂಡಿಗಾಳಿಯಲ್ಲಿ ಬೆಚ್ಚಗಿನ ಗಾಳಿ ಹರಿದಂತೆ. ಹತ್ತಿರ ಕೂಡ್ರಿಸಿಕೊಂಡು ಕ್ಕ್ಷೇಮ ಸಮಾಚಾರ. ಹಣ ಕೊಡಿಸಿದಳು. ತೋಳಿಗೆ ಕೈ ಹಾಕಿ ಹೊರಬಂದಳು. ಅವಳು ಉಳಿದವರ ಜೊತೆಗೂ ಹಾಗೆಯೇ ವರ್ತಿಸುತ್ತಿರಬೇಕು. 'ಇಂಗ್ಲೆಂಡಿನಾಗ ಹಲಕಾ ಹೆಣ್ಣು ಬಾಳ. ಸ್ವಲ್ಪ ನೋಡಿ ಬಾಳುವೆ ಮಾಡು'- ಎಂದು ಹೆಂಡತಿಯ ವಾರ್ನಿಂಗ್ ಸಹಜವಾಗಿಯೇ ನೆನಪಾಯಿತು. ನಗೆ ಬಂತು.
*****


ಇಲ್ಲಿಯ ಹೆಣ್ಣುಗಳು, ಇಲ್ಲಿಯ ಗಂಡುಗಳು..... ಯಾವುದು ಏನು ಅಂತು ಪತ್ತೆಯಾಗುವುದೇ ಕಷ್ಟವಾಗಿತ್ತು ಮೊದಮೊದಲು. ಉದ್ದುದ್ದ ಕೆಂಗೂದಲು. ಕೆಂಪು ಮೋರೆ. ಗಡ್ಡವಿಲ್ಲದ ಗಲ್ಲಗಳು. ಗಂಡಿಗೆ ಸೀರೆ ಉಡಿಸಿದರೆ ಭಾರತದಲ್ಲಿ ಯಾವನಾದರೂ ಸೆರಗು ಜಗ್ಗಬಹುದು..... ಈಗೀಗ ಗೊತ್ತಾಗುತ್ತಿದೆ. ಕಣ್ಣಿನ ಬೆಳಕಿನಲ್ಲಿ, ಎದೆಯ ್ವತಗಳಲ್ಲಿ ಇತ್ಯಾದಿ


ಲಂಡನ್ನಿಗಿಂತ ಲೀಡ್ಸ್ ಹೆಚ್ಚು    Warm and human ಅನಿಸುತ್ತದೆ. ಜನ ಇಲ್ಲಿ ನಗುತ್ತಾರೆ. ಗಟ್ಟಿಯಾಗಿ ಮಾತಾಡುತ್ತಾರೆ. ಜೋಕು ಹೊಡೆಯುತ್ತಾರೆ.   Overseas students ಅಂದರೆ ಹೆಚ್ಚು ಕಾಳಜಿ. ಆದರೂ ಅವರ national character., ಅದು ಬಹುಶಃ ಅವರ Hypocrisy?. ಡಾರ್ಯಾವೆಟ್ಜ್ ಅಂತ ಫಿಲಾಸಫಿ ಪ್ರಾಧ್ಯಾಪಕ ಮೊನ್ನೆ ಇದೇ ಹೇಳಿದರು. ಇಷ್ಟು ಲಕ್ಷö್ಮಣ ರೇಖೆ, ಅದರ ಆಚೆ ದಾಟುವಂತಿಲ್ಲ. ಅದರ ಈಚೆ ಎಲ್ಲ ಇದೆ. ಹಾಗಾದರೆ ಅವರ ವಿನಯ, ಅತಿಥಿ ಸತ್ಕಾರ, ನಗು ಎಲ್ಲ ವಂಚಕತನವೇ? ಊಥಿಠಿoಛಿಡಿisಥಿ? ಒಬ್ಬ ಆಫ್ರಿಕನ್ ವಿದ್ಯಾರ್ಥಿಯ ಪ್ರಶ್ನೆ ಇದು. ಉತ್ತರ : ಅಲ್ಲ, ಅದು ಅವರ ಗುಣಧರ್ಮ.್ಯಾವೆಟ್ಸ್ ಬಹಳ ಗಂಭೀರವಾಗಿ ಕೆಲ ಮೂಲ ಸಮಸ್ಯೆಗಳ ಬಗ್ಗೆ ಮಾತಾಡಿದರು. ಜನಕ್ಕೆ ವಿಚಾರ ಸ್ವಾತಂತ್ರö್ಯವಿದೆ, ವಾಕ್ಕೃತಿ ಸ್ವಾತಂತ್ರ್ಯವಿದೆ. ಆದರೆ ಎಲ್ಲಿಯೋ- ಜನನ-ಮರಣದ ವರ್ತುಲದಲ್ಲಿ ಎಲ್ಲಿಯೋ-ಕೊಂಡಿ ತಪ್ಪಿದೆ. ಒಂದು ಇನ್ನೊಂದಕ್ಕೆ, ನೆರಳು ನೆರಳಲ್ಲಿ ಲೀನವಾದಂತೆ, ಹೊಂದಿಕೊಂಡಿಲ್ಲ. ಹೀಗಾಗಿ ಸಾವು ಇವರಿಗೆ ಸುಲಭವಾಗಿ ದಕ್ಕುವುದಿಲ್ಲ. They can't face death calmly. ಹೌದು. ಇಲ್ಲಿಯ ಮುದುಕರು. ಮುದುಕಿಯರು..... ನೋಡಿದಾಗ ಒಂದು ಬಗೆಯ ವಿಚಿತ್ರ ಸಂಕಟವಾಗುತ್ತದೆ. ಕವಿತೆ ಬರೆಯಬೇಕೆನಿಸುತ್ತದೆ. ಅಡಿಯಿಂದ ಮುಡಿತನಕ ಉಣ್ಣೆಯ ಬಟ್ಟೆ ಬೆಲೆಯುಳ್ಳವು. ಬಣ್ಣಬಣ್ಣದವು. ಆರೋಗ್ಯ ಸರಿ. ಆದರೆ ಕಣ್ಣಲ್ಲಿ ಜೀವವಿಲ್ಲ. ಅಡವಿಯಲ್ಲಿ ತಪ್ಪಿಸಿಕೊಂಡವರಂತೆ ಮುಖ. ಬುದ್ಧನಂತೆ ನಿರ್ವಿಕಾರ ಮುಖ. ದಾರಿ ಬದಿಯ ಬೆಂಚಿನಲ್ಲಿ ಕುಳಿತು ನೋಡುತ್ತವೆ ಅಥವಾ ನೋಡುವುದಿಲ್ಲ. ಭರ್ ಭರ್ ಎಂದು ಭರಗುಟ್ಟಿ ಓಡುವ Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought