Chania

ಕಣ್ಣಿದ್ದರೂ ಕಾರಣ ಕನ್ನಡ


                    ಜಾನಪದ ನಾಣ್ಣುಡಿಯಂತೆ ಕನ್ನಡಕ್ಕೇಕೆ ಬಂತು ಈ ಗತಿ! ಅಂದರೆ ಏನಾಗಿದೆ ಅಂತ ತಿಳಿಯುವುದಕ್ಕಿಂತ ಏನಾಗುತ್ತಿದೆ ಅನ್ನುವುದನ್ನು ತಿಳಿಯುವುದು ನಿಜವಾದ ಕನ್ನಡಿಗನ ಧರ್ಮ. ಜಾತಿ-ಭೇದ, ಮನೋಧರ್ಮ, ಅಭಿಮಾನ, ದುರಭಿಮಾನ, ಪ್ರತಿಷ್ಠೆ ಹಾಗೂ ಕೀಳರಿಮೆಗಳ ಮರದಲ್ಲಿ ಹಸಿರು ತುಂಬಿರುವ ಎಲೆಗಳು ಎಂದಾದರೊಂದು ದಿನ ಉದುರಲೇಬೇಕು. ಹಾಗೆಯೇ ವಸಂತಮಾಸದಲ್ಲಿ ಚಿಗುರೊಡೆಯಲೇಬೇಕು !
                     ಅವರವರ ಮಾತೃಭಾಷೆಯಲ್ಲಿ ಕೀರ್ತಿ ಸಂಪಾದಿಸಿದರೆ ಅದು ಕೀರ್ತಿಯಲ್ಲವೆ? ಅದು ಶಿವನಿಗೆ ಒಪ್ಪುವುದಿಲ್ಲವೆ? 


                    ಕನ್ನಡದ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕೀಳರಿಮೆಯ ತಾಂಡವ ನೃತ್ಯವಾಗುತ್ತದೆ. ಪ್ರಪಂಚಜ್ಞಾನ ಸಂಪಾದಿಸಲು ಬೇರೆ ಭಾಷೆ ಅವಲಂಬಿಸಬೇಕಾಗುವುದು ಸಹಜ. ಅಂದ ಮಾತ್ರಕ್ಕೆ ಕನ್ನಡವನ್ನು ದೂರತಳ್ಳುವುದು ನ್ಯಾಯವೇ? ನಮ್ಮ ತಾಯಿನಾಡಿನ ಕಲೆ, ಸಂಸ್ಕೃತಿಯನ್ನು ಎತ್ತಿತೋರಬೇಕು. ಮೂಲವಾಗಿ ಕನ್ನಡದಿಂದ ಪ್ರತಿಷ್ಠೆಹೊಂದಿ ನಂತರ ಕನ್ನಡದ ಮೇಲೆ ನಿರುತ್ಸಾಹ ತಾಳುವುದು ಈಗಿನ ಕನ್ನಡಿಗರ ದೌರ್ಬಲ್ಯ ಎಂದು ಹೇಳಿದರೆ ತಪ್ಪಾಗಲಾರದು.   ಕನ್ನಡವೇನು ಭಾಷೆಯಲ್ಲವೇ? ಅದಕ್ಕೆÃನು ಪಾರಂಪರಿಕ ಚರಿತ್ರೆಯಿಲ್ಲವೆ? ಅದಕ್ಕೇನು ಲಿಪಿಯಿಲ್ಲವೆ?  ಮತ್ತೇಕೆ ಅದರ ಬಗ್ಗೆ ತಾತ್ಸಾರ?.
ಮನುಷ್ಯನಾಗಿ ಹುಟ್ಟಿದ ಮೇಲೆ ಸಂಪರ್ಕ ಹೊಂದಲು ಒಂದು ಭಾಷೆ ಅಗತ್ಯ ಅಂದ ಮಾತ್ರಕ್ಕೆ ಬೇರೆ ಭಾಷೆಗಳು ಗಣನೆಗೆ ಬೇಡ ಎಂದು ಅಲ್ಲ. ನಮ್ಮ ಮೂಲವಂಶಜರು ಪಾರಂಪರಿಕವಾಗಿ ಬಳಸಿಕೊಂಡು ಬಂದ ನುಡಿಯನ್ನು ಕಾಪಾಡುವುದು ಅಭಿಮಾನ. ಅದು ದುರಭಿಮಾನವಲ್ಲ. 


                   ಭಾರತ ಬಹುಭಾಷೆಗಳ ದೇಶ. ಅವರವರ ಪ್ರಾಂತ್ಯಗಳಲ್ಲಿ ವಂಶಜರು ಹಾಕಿದ ಈ ಭಾಷಾ ಬುನಾದಿಯನ್ನು ಇತರರು ಅಭಿಮಾನದಿಂದ ಕಾಣುತ್ತ ಬಂದಿಲ್ಲವೆ. ಮತ್ತೇಕೆ ಕನ್ನಡಿಗರಿಗೆ ನಿರುತ್ಸಾಹ! ಶ್ರೇಷ್ಠ ಕವಿಗಳು ಹೇಳಿರುವಂತೆ ಜ್ಞಾನ ಸಂಪಾದಿಸಲು ಮಾತೃಭಾಷೆಯೇ ಬಹುಮುಖ್ಯ ಸಾಧನ. ಕನ್ನಡ ಮಾತನಾಡಿದರೆ ನೀನು ಜ್ಞಾನ ಸಂಪಾದಿಸಲು ಸಾಧ್ಯವಿಲ್ಲವೇ? ಮೊದಲು ತನ್ನಯ ಕೀಳರಿಮೆಯ ಪಾತ್ರವನ್ನು ಬದಿಗೊತ್ತಿ ತನ್ನ ತಾಯಿ ಕೊಟ್ಟ ಭಾಷೆಯನ್ನು ಉಳಿಸಿ ಅದರಿಂದ ಗೌರವ ಸಂಪಾದಿಸುವುದು ನಿಜಕ್ಕೂ ಮಾತೃಭೂಮಿಗೆ ಸಲ್ಲಿಸಬೇಕಾದ ಕಾಣಿಕೆ. 

                 ಬೇರೆ ರಾಷ್ಟ್ರ ರಾಜ್ಯಗಳಲ್ಲಿ ತಮ್ಮ ಮಾತೃಭಾಷೆಯಿಂದಲೇ ಕೀರ್ತಿ ಪತಾಕೆಗಳನ್ನು ಹಾರಿಸಿರುವವರು ಬಹುಮಂದಿ. ಉದಾ : ಜರ್ಮನಿ, ರಷ್ಯ, ಜಪಾನ ಇಂತಹ ಮುಂದುವರಿದ ರಾಷ್ಟçಗಳಲ್ಲಿ ಮಾತೃಭಾಷೆಯ ಮೂಲಕವೇ ಪ್ರತಿಯೊಂದು ಜೀವನ ಸಂಪರ್ಕ, ತಾಂತ್ರಿಕತೆ, ವೈದ್ಯಕೀಯ ಎಲ್ಲವೂ ನಡೆಯುತ್ತಿರುವುದು. ಅವರಿಗೇಕೆ ಪರಭಾಷಾ ವ್ಯಾಮೋಹ ಇಲ್ಲ?  ಇದನ್ನು ಪರಿಗಣನೆಗೆ ತಂದರೆ ಮೇಲಿನ ಜಾನಪದ ನಾಣ್ಣುಡಿ  ಹೆಚ್ಚು ಅರ್ಥಪೂರ್ಣವಾಗುತ್ತದೆ.


                        ಒಂದು ಗಾದೆಯನ್ನು ನಾವು ತುಲನೆ ಮಾಡಿದರೆ ಅದು “ಹೊಳೆ ದಾಟಿದ ಮೇಲೆ ಅಂಬಿಗನ ಚಿಂತ್ಯಾಕೆ”  ಎಂಬಂತೆ ಬಾಲ್ಯದಿಂದ ಮಾತೃವಿನಿಂದ ಕಲಿತು ನಂತರ ಹೊಳೆಯ ದಡವನ್ನು, ಅಂಬಿಗನನ್ನು ಮರೆಯುವುದು ಈಗಿನ ಕನ್ನಡಿಗರ ಸಹಜ ಗುಣವಾಗಿದೆ, ಇದರಿಂದ ತಮಗೆ ಪ್ರತಿಷ್ಠೆ ಗೌರವ ಬರುತ್ತದೆ ಎಂದು ತಿಳಿಯುವವರು ಬಹಳಮಂದಿ. ಕನ್ನಡ ಭಾಷೆ ನಮಗೆ ಏಕೆ ಬೇಕು? ಅದರಿಂದ ಏನು ಉಪಯೋಗ? ಅದರ ಪರಂಪರೆಯನ್ನು ಏಕೆ ಕಾಪಾಡಬೇಕು ಎನ್ನುವ ಪ್ರಶ್ನೆಗಳನ್ನು ನಾವು ಆಳವಾಗಿ ಪರಿಶೀಲಿಸಿದರೆ ಕನ್ನಡ ನಮಗೆ ಬೇಕಾಗಿರುವುದು ಬರೀ ಜ್ಞಾನ ಸಂಪಾದನೆಗಲ್ಲ. ಭಾಷೆಯನ್ನು ಕಾಪಾಡುವುದರಲ್ಲಿ ಕನ್ನಡಿಗರಾದ ನಾವು ಮೂಲಭೂತವಾಗಿ  ಎಡವಿದ್ದೆÃವೆ. 


                        ಕನ್ನಡ ನೆಲದಲ್ಲಿ ಬದುಕುವ ಜನಗಳು ಒಂದು ಸಂಸಾರವಿದ್ದಂತೆ. ಭಾರತ ದೇಶವೇ ಜಾಗತೀಕರಣದ ಭೂಪಟದಲ್ಲಿ ಛಾಪು ಮೂಡಿಸುತ್ತಿದೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಮುನ್ನಡೆಯುತ್ತಿರಬೇಕಾದರೆ, ತನ್ನ ನೆಲ, ಸಂಸ್ಕೃತಿ, ಬದುಕು ಎಲ್ಲವನ್ನೂ ಕಳೆದುಕೊಂಡು ದೇಶದ ಅಭಿವೃದ್ಧಿ ಪಥಕ್ಕೆ ಮಾದರಿ ರಾಜ್ಯವಾಗಿ, ಭೂಪಟದಲ್ಲಿ ಹೆಗ್ಗುರುತು ಮೂಡಿಸಿದೆ. 


                        ಈ ಭರಾಟೆಯಲ್ಲಿ ನಮ್ಮತನ, ನಮ್ಮ ಬದುಕು, ನಮ್ಮ ಗುರುತು ಎಲ್ಲವನ್ನೂ ಕಳೆದುಕೊಂಡು ಕೇವಲ “ಉದ್ಯೋಗ ಸೃಷ್ಟಿ” ಅಭಿವೃದ್ಧಿ ಮಂತ್ರವೆಂಬ ಘೋಷಗಳಲ್ಲಿ ಕ್ಷಣಿಕ ಸಮೃದ್ಧಿ, ನಷ್ಟ- ವಂಚನೆಗಳಿಗೆ ಒಳಗಾಗುತ್ತಿದ್ದೇವೆ. ಇದರ ಒಳಪದರದ ನೋವು, ನಲಿವು, ಸಂಕಷ್ಟ, ಮುಂದೆ ಆಗಬಹುದಾದಂತಹ ಪರಿಣಾಮಗಳು ಕೇವಲ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರಿಗೆ ಅನುಭವದ ಮತ್ತು ನೋವಿನ ಸ್ಪರ್ಶ ತಿಳಿದಿರುತ್ತದೆ. ಕೆಲವರು ತಮ್ಮ ನೋವನ್ನು ಬರವಣಿಗೆಯಲ್ಲಿ, ಇನ್ನೂ ಕೆಲವರು ಹೋರಾಟದ ಮೂಲಕವೂ, ಇನ್ನೂ ಕೆಲವರು ತಮ್ಮ ಅಧಿಕಾರದಿಂದಲೂ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಾರೆ. 


                         ಭರತ ಖಂಡದಲ್ಲಿ ಛಿದ್ರವಾಗಿ ಹಂಚಿಹೋಗಿದ್ದ ಕನ್ನಡನಾಡನ್ನು ಒಂದುಗೂಡಿಸಲು ಪ್ರಯತ್ನಪಟ್ಟ ಮಹನೀಯರ ತ್ಯಾಗ, ಹೋರಾಟಗಳ ಪರಿಶ್ರಮ ಮಾತೃಭಾಷೆ ಕನ್ನಡದಲ್ಲಿ ಕಲಿತವರಿಗೆ ಮಾತ್ರ ತಿಳಿದಿರುತ್ತದೆ. ಇನ್ನು ಕನ್ನಡವೇ ಮರೆಯಾದ ಮೇಲೆ, ಕನ್ನಡ ಜನಾಂಗದ ಗುಂಪೇ ಮರೆಯಾಗುತ್ತಿದೆ. ಕನ್ನಡದ ಗುಂಪೇ ಮರೆಯಾದ ಮೇಲೆ ಕರ್ನಾಟಕವೇ ಜಾಗತಿಕ ಎಂಬ ದೈತ್ಯ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗುತ್ತದೆ. 


                        ಚೈನ, ಜಪಾನ್, ಯುರೋಪ್ ರಾಷ್ಟçಗಳು ಜಾಗತೀಕರಣಗೊಂಡಿದ್ದರೂ ಈಗಲೂ ತಮ್ಮ ಸವಲತ್ತುಗಳು, ತಮ್ಮ ದೇಶದ ಭಾಷೆ ಅಸ್ಮಿತೆಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುತ್ತಿವೆ. ಮತ್ತು ತಮ್ಮ ದಿನ ನಿತ್ಯದ ಬದುಕು, ಆಚಾರ-ವಿಚಾರ, ಕಲೆ, ವಿಜ್ಞಾನ, ಶಿಕ್ಷಣ ಎಲ್ಲವೂ ಅವರರವರ ಮಾತೃ ಭಾಷೆಯಲ್ಲಿ ನಡೆಯುತ್ತವೆ. ಆ ದೇಶಗಳು, ತಮ್ಮ ಭಾಷೆಯ ಪೌರತ್ವದಲ್ಲೇ ಮೆರೆಯುತ್ತಿವೆ. ದೊಡ್ಡ ದೊಡ್ಡ ವಿಜ್ಞಾನಿಗಳು ಅವರ ಪುಸ್ತಕಗಳನ್ನು. ಅವರ ಭಾಷೆಯಲ್ಲಿಯೇ ಬರೆಯುತ್ತಾರೆ. ಅವರ ಅನ್ವೇಷಣೆಗಳು ಅವರದೇ ಭಾಷೆಯಲ್ಲಿರುತ್ತವೆ.  ನಂತರ ಜಾಗತಿಕ ಭಾಷೆಯಾದ ಆಂಗ್ಲಭಾಷೆಗೆ ತರ್ಜುಮೆ(ಭಾಷಾಂತರ)ಗೊಳ್ಳುತ್ತವೆ. 


                        ಭಾರತದ ಎಲ್ಲಾ ಭಾಷೆಗಳು ಜಾಗತಿಕ ಜಾಲಕ್ಕೆ ಸಿಕ್ಕಿ ನಲುಗುತ್ತಿವೆ. ಇದಕ್ಕೆಲ್ಲ ಪರಿಹಾರ. ಮಾತೃಭಾಷೆಯನ್ನು ರಕ್ಷಿಸುವುದು ಭಾರತೀಯರೆಲ್ಲರ ಕರ್ತವ್ಯ
 

- ಕರುಣೇಶ್ ಕಡತನಾಳು.
 


Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought