Chania

ವೈದ್ಯ-ರೋಗಿಗಳಿಬ್ಬರನ್ನೂ ಕಾಡಿಸುವ  

ತಲೆನೋವು 

-ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


“ಹತ್ತಾರು ವೈದ್ಯರುಗಳನ್ನು ಕಂಡಿದ್ದೇನೆ. ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನೂ ಮಾಡಿಸಿದ್ದೇನೆ, ನೀಡಿದ ಎಲ್ಲ ಔಷಧಿಗಳನ್ನೂ ತಗೊಂಡಿದ್ದೀನಿ. ಆದ್ರೂ ತಲೆನೋವು ಮಾತ್ರ ಕಮ್ಮಿ ಆಗ್ತಿಲ್ಲ, ಯಾರೂ ನನ್ನ ತಲೆನೋವನ್ನು ವಾಸಿಮಾಡ್ಲಿಕ್ಕೆ ಸಾಧ್ಯವಾಗಿಲ್ಲ, ಏನು ಮಾಡೋದು” ಎನ್ನುವುದು ರೋಗಿಯ ಅಳಲಾದರೆ, ಯಾವ ಪರೀಕ್ಷೆಗಳಿಂದಲೂ ತಲೆನೋವಿಗೆ ನಿರ್ದಿಷ್ಟ ಕಾರಣವನ್ನು ಗೊತ್ತು ಮಾಡ್ಲಿಕ್ಕೆ ಸಾಧ್ಯವಾಗುತ್ತಲೇ ಇಲ್ವಲ್ಲ, ನೋವು ನಿವಾರಕ ಔಷಧಗಳು ತಾತ್ಕಾಲಿಕವಾಗಿ ಉಪಶಮನ ನೀಡುತ್ತಿವೆಯಾದರೂ ಶಾಶ್ವತವಾಗಿ ಪರಿಹಾರವನ್ನು ಕೊಡಲು ಸಾಧ್ಯವಾಗುತ್ತಿಲ್ಲವಲ್ಲ, ಏನನ್ನಾದರೂ ಮಿಸ್ ಮಾಡಿದ್ದೀನಾ ಎಂಬುದು ವೈದ್ಯರ ಚಿಂತೆ. 
    ಹೀಗೆ ರೋಗಿ ಮತ್ತು ವೈದ್ಯರಿಬ್ಬರನ್ನೂ ಕಾಡುವ ತಲೆನೋವಿನ ಪ್ರಸಂಗಗಳು ಹಲವಾರು. ಬಹುಪಾಲರಲ್ಲಿ ತಲೆನೋವಿಗೆ ನಿರ್ದಿಷ್ಟ ಕಾರಣವನ್ನು ಪತ್ತೆ ಮಾಡಿ, ಶಾಶ್ವತ ಪರಿಹಾರ ನೀಡುವುದು ಕಷ್ಟಕರ. ಸಣ್ಣ ಪುಟ್ಟ ಮಾನಸಿಕ ಅವ್ಯವಸ್ಥೆಗಳು, ಹಸಿವು ಇತ್ಯಾದಿ ಸಾಮಾನ್ಯ ಸಮಸ್ಯೆಗಳಿಂದ ಹಿಡಿದು ಗಂಭೀರ ಸ್ವರೂಪದ ತಲೆಬುರುಡೆಯೊಳಗಿನ ಕ್ಯಾನ್ಸರ್ ಇತ್ಯಾದಿಗಳು ತಲೆನೋವಿಗೆ ಕಾರಣವಾಗಬಹುದು. ಮಾರಣಾಂತಿಕವಾಗಬಲ್ಲ ತಲೆನೋವಿನ ಕಾರಣಗಳನ್ನು ಬಹುಬೇಗ ಗುರುತಿಸಿ, ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಾವಿನಿಂದ ಪಾರಾಗಬಹುದು. 
    ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಂದಲ್ಲಾ ಒಂದು ಬಾರಿ ತಲೆನೋವಿಗೀಡಾಗುತ್ತಾರೆ. ಇದೊಂದು ಸಾಮಾನ್ಯ ತೊಂದರೆಯಾದುದರಿಂದ ಇದನ್ನು ನಿರ್ಲಕ್ಷಿಸುವವರೇ ಹೆಚ್ಚು. ಗಂಭೀರ ಸ್ವರೂಪದ ಕಾಯಿಲೆಗಳಿಂದುಂಟಾಗುವ ತಲೆನೋವನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದರೆ ಅದರಿಂದುಂಟಾಗುವ ಘೋರ ಪರಿಣಾಮಗಳಿಂದ ಪಾರಾಗಬಹುದು.
ತಲೆನೋವಿಗೆ ಕಾರಣಗಳೇನು?
    ತಲೆಬುರುಡೆಯು ತಲೆಬುರುಡೆಯ ಮೂಳೆಗಳು, ಸೈನಸ್ಸುಗಳು, ಕಿವಿ, ಮೂಗು, ಕಣ್ಣು, ಬಾಯಿಗುಡಿ, ಗಂಟಲು ಮತ್ತು ತಲೆಬುರುಡೆಯೊಳಗೆ ಮೆದುಳು, ಮನಸ್ಸು, ಮೆದುಳು ಪೊರೆ ಹಾಗೂ ರಕ್ತನಾಳಗಳನ್ನೊಳಗೊಂಡಿದ್ದು, ಇವೆಲ್ಲವುಗಳ ಕಾಯಿಲೆಗಳಲ್ಲಿ ತಲೆನೋವು ಉಂಟಾಗಬಹುದು. ತಲೆಯ ಒಂದೊಂದು ರಚನೆಯೂ ಹಲವಾರು ವಿಧದ ಕಾಯಿಲೆಗಳಿಗೀಡಾಗಬಹುದು. ಆದುದರಿಂದ ತಲೆನೋವಿನ ಕಾರಣಗಳು ಹಲವಾರು. ತಲೆಯ ಒಂದೊಂದು ರಚನೆಯ ಮತ್ತು ಕಾರಣದ ತಲೆನೋವು ಅದರದೇ ಆದ ವಿಶಿಷ್ಟ ಗುಣ ಲಕ್ಷಣಗಳನ್ನು ಒಳಗೊಂಡಿರುತ್ತದೆ.
ತಲೆನೋವಿನ ವಿಧಗಳು
    ನೋವಿನ ರೀತಿಯನ್ನಾಧರಿಸಿ ತಲೆನೋವನ್ನು ಮಿಡಿಯುವ ತಲೆನೋವು, ಒತ್ತುವ ತಲೆನೋವು, ಉರಿಯುವ ತಲೆನೋವು, ಸಾಧಾರಣ ನೋವಿನ ತಲೆನೋವೆಂದು ವರ್ಗೀಕರಿಸಲಾಗಿದೆ. ತಲೆನೋವು ಹಣೆ, ಕೆನ್ನೆ, ನೆತ್ತಿ, ಕಪಾಲ, ತಲೆಬುರುಡೆಯ ಹಿಂಭಾಗದಲ್ಲಿರಬಹುದು; ಎಡ ಅಥವಾ ಬಲಭಾಗ (ಅರ್ಧ ತಲೆನೋವು) ಅಥವಾ ೨ ಕಡೆಗಳಲ್ಲೂ ತಲೆನೋವಿರಬಹುದು. ಒಂದೊಂದು ಕಾಯಿಲೆಯಲ್ಲಿ ಒಂದೊಂದು ಭಾಗದಲ್ಲಿ ಮತ್ತು ಒಂದೊಂದು ವಿಧದ ತಲೆನೋವು ಉಂಟಾಗುತ್ತದೆ. ಸಾಮಾನ್ಯವಾಗಿ ತಲೆನೋವಿನಲ್ಲಿ ಧಿಡೀರನೆ ಅಲ್ಪಾವಧಿಯಲ್ಲಿ ಕಾಣಿಸಿಕೊಳ್ಳುವ ದಿಢೀರ್ ತಲೆ ನೋವು ಮತ್ತು ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳುವ ತಲೆ ನೋವು ಎಂಬ ಎರಡು ವಿಧಗಳಿವೆ. 
    ಧಿಡೀರ್ ತಲೆನೋವುಗಳು ಸಾಮಾನ್ಯವಾಗಿ ತಾತ್ಕಾಲಿಕ ತಲೆನೋವುಗಳಾಗಿದ್ದು ಸೂಕ್ತ ಚಿಕಿತ್ಸೆಯಿಂದ ವಾಸಿಯಾಗುತ್ತವೆ. ದೀರ್ಘಾವಧಿಯ ತಲೆನೋವುಗಳು ಬೇರೂರಿದ ತಲೆನೋವುಗಳಾಗಿದ್ದು ಕೆಲವು ಸೂಕ್ತ ಚಿಕಿತ್ಸೆಯಿಂದ ವಾಸಿಯಾಗಬಹುದು, ಮತ್ತೆ ಕೆಲವು ವಾಸಿಯಾಗದಿರಬಹುದು. ಸಾಮಾನ್ಯವಾಗಿ ಕಂಡು ಬರುವ ತಲೆನೋವುಗಳು ಹೀಗಿವೆ.
ಸೈನಸ್ಸೂತುರಿ (ಸೈನಸೈಟಿಸ್)
    ತಲೆಬುರುಡೆಯ ಮುಂಭಾಗದ ಮೂಳೆಗಳಲ್ಲಿರುವ ಗೂಡಿನೋಪಾದಿಯ ರಚನೆ ಸೈನಸ್‌ಗಳಾಗಿದ್ದು, ಇವು ಸೋಂಕಿಗೀಡಾಗಿ ತಲೆಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ದಿಢೀರನೆ ಅಥವಾ ಬೇರೂರಿದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಜ್ವರ, ನೆಗಡಿ ಮತ್ತು ಮೂಗಿನ ಮೇಲು ಭಾಗ ಅಥವಾ ಕೆನ್ನೆ ಭಾಗಗಳಲ್ಲಿ ನೋವು ಉಂಟಾಗುತ್ತದೆ. ಸೂಕ್ತ ಸೋಂಕು ನಿವಾರಕ ಔಷಧಗಳಿಂದ ಇದನ್ನು ವಾಸಿ ಮಾಡಬಹುದು. ಬೇರೂರಿದ ಕಾಯಿಲೆಗೆ ಶಸ್ತçಕ್ರಿಯೆ ಅವಶ್ಯಕವಾಗಬಹುದು.
ಮೈಗ್ರೇನ್ ತಲೆನೋವು
     ಹೆಂಗಸರಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುವ ದೀರ್ಘಾವಧಿಯ ತಲೆನೋವಿದು. ಕಂತು, ಕಂತುಗಳಲ್ಲಿ ಕೆಲಕಾಲ ಬಿಟ್ಟು ಬಿಟ್ಟು ಕಾಣಿಸಿಕೊಳ್ಳುತ್ತದೆ. ತಲೆಬುರುಡೆಯ ಅರ್ಧ ಭಾಗಕ್ಕೆ ಸೀಮಿತವಾಗುವ ತಲೆನೋವು (ಅರ್ಧ ತಲೆನೋವು) ಮಿಡಿಯುವ ನೋವಿನಂತಿರುತ್ತದೆ. ವಾಂತಿ, ದೃಶ್ಯ ತೊಂದರೆಗಳು, ಮಾತಿನ ತೊಂದರೆಗಳು, ಹೊಟ್ಟೆನೋವು ಇತ್ಯಾದಿಗಳು ಇದರ ಜೊತೆಗೂಡಿರುತ್ತವೆ. ಅಪರೂಪವಾಗಿ ಲಕ್ವ, ಚಲನೆ ಮತ್ತು ತೂರಾಟದ ತೊಂದರೆಗಳುಂಟಾಗಬಹುದು. ವಾಸನೆ, ಹೊಗೆ, ಶಬ್ದಗಳು, ಬೆಳಕು, ಮಾನಸಿಕ ಒತ್ತಡ, ಮುಟ್ಟು, ಮುಟ್ಟಿನ ಅಂತ್ಯ ಇತ್ಯಾದಿಗಳು ಈ ತಲೆನೋವನ್ನು ಪ್ರಚೋದಿಸಬಹುದು. ಇದರಿಂದ ಸಾಮಾನ್ಯವಾಗಿ ಯಾವ ಬಗೆಯ ಅವಘಡಗಳುಂಟಾಗುವುದಿಲ್ಲ. 
    ಅಪರೂಪವಾಗಿ ಲಕ್ವ, ಮೆದುಳಿನ ತೊಂದರೆಗಳುಂಟಾಗಬಹುದು. ಇದಕ್ಕೆ ಕಾರಣ ಇನ್ನೂ ನಿಗೂಢ. ತಲೆಬುರುಡೆಯೊಳಗಿನ ರಕ್ತನಾಳಗಳ ಹಿಗ್ಗಿಕೆ ಇದಕ್ಕೆ ಪ್ರಮುಖ ಕಾರಣ. ವಂಶವಾಹಿನಿಗಳ ನ್ಯೂನತೆ, ಅತಿ ಸೂಕ್ಕ್ಷ್ಮತೆಯ ರಕ್ತನಾಳಗಳು ಮತ್ತು ರಕ್ತನಾಳ ಹಿಗ್ಗಿಕ ರಾಸಾಯನಿಕಗಳ ಉತ್ಪತ್ತಿ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ದಿಷ್ಟ ಚಿಕಿತ್ಸೆ ಇಲ್ಲ. ರಕ್ತನಾಳಗಳನ್ನು ಕುಗ್ಗಿಸುವ ಔಷಧಗಳು ತಾತ್ಕಾಲಿಕವಾಗಿ ಉಪಶಮನ ನೀಡುತ್ತವೆ. ಆರೋಗ್ಯ ಪೂರಕ ಸಂತೃಪ್ತಿಯ ಜೀವನಶೈಲಿ, ಸಮತೋಲನ ಆಹಾರ ಮರುಕಳಿಕೆಯನ್ನು ತಡೆಯುತ್ತದೆ.
 ಮಾನಸಿಕ ಒತ್ತಡದ ತಲೆನೋವು (ಟೆನ್‌ಷನ್ ಹೆಡ್ಡೆಕ್)
    ಮಾನಸಿಕ ತುಮುಲಗಳು ಮತ್ತು ಮಾನಸಿಕ ರೋಗಗಳೂ ಸಹ ತಲೆ ನೋವಿಗೆ ಕಾರಣಗಳಾಗಬಹುದು. ಮಾನಸಿಕ ಒತ್ತಡದಿಂದ ಉಂಟಾಗುವ ತಲೆನೋವು ತಲೆ ಬುರುಡೆಯ ಎಲ್ಲ ಭಾಗಗಳಲ್ಲಿರಬಹುದು ಅಥವಾ ತಲೆ ಹಿಂಬದಿಯಲ್ಲಿರಬಹುದು. ಅಲ್ಪ ಪ್ರಮಾಣದ ತೀವ್ರತೆಯ ನೋವಾಗಿದ್ದು ದೀರ್ಘಾವಧಿಗಿರುತ್ತದೆ. ಈ ನೋವು  ದೈನಂದಿನ ಕಾರ್ಯಗಳಿಗೆ ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ. ನಿದ್ರೆಯ ಸಮಯದಲ್ಲಿ ಮತ್ತು ವಿಶ್ರಾಂತಿ ಸಮಯದಲ್ಲಿ ಈ ನೋವಿರುವುದಿಲ್ಲ. ಇದರಿಂದ ಯಾವ ಗಂಭೀರ ಸ್ವರೂಪದ ಅವಘಡಗಳುಂಟಾಗುವುದಿಲ್ಲ. ಮಾನಸಿಕ ಸುಸ್ಥಿತಿಯನ್ನು ಕಾಪಾಡಿಕೊಳ್ಳುವುದರಿಂದ ಇದರಿಂದ ಪಾರಾಗಬಹುದು.
ಟ್ರೆಜಮೈನಲ್ ತಲೆನೋವು
    ಮುಖದಲ್ಲಿರುವ ಟ್ರೆಜಮೈನಲ್ ನರ ತೊಂದರೆಯಿಂದ ಉಂಟಾಗುವ ತೀವ್ರ ಪ್ರಮಾಣದ ಅರ್ಧ ತಲೆ ನೋವಿದು. ಬಿಟ್ಟು ಬಿಟ್ಟು ಕಣ್ಣು ಮತ್ತು ಕಪಾಲ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಶಸ್ತç ಕ್ರಿಯೆಯಿಂದ ನೋವನ್ನು ಶಾಶ್ವತವಾಗಿ ನಿವಾರಿಸಲಾಗುತ್ತದೆ. ನೋವು ನಿವಾರಕ ಔಷಧಗಳು ತಾತ್ಕಾಲಿಕವಾಗಿ ಉಪಯೋಗಕಾರಿ. ರಕ್ತನಾಳದ ಮಿಡಿತ ಟ್ರೆಜಮೈನಲ್ ನರವನ್ನು ಅದುಮುವುದರಿಂದ ಇದುಂಟಾಗುತ್ತದೆ.
ತಲೆಬುರುಡೆಯೊಳಗಿನ ಕಾರಣಗಳು
    ತಲೆಬುರುಡೆಯೊಳಗಿನ ರಚನೆಗಳಾದ ಮೆದುಳು, ರಕ್ತನಾಳಗಳು ಮತ್ತು ಮೆದುಳುಪೊರೆಯ ಕಾಯಿಲೆಗಳಿಂದುಂಟಾಗುವ ಗಂಭೀರ ಸ್ವರೂಪದ ತಲೆನೋವು. ಮೆದುಳಿನ ಸೋಂಕು, ಮೆದುಳಿನ ಕ್ಯಾನ್ಸರ್, ಮೆದುಳಿನಲ್ಲಿನ ರಕ್ತಸ್ರಾವ, ಮೆದುಳು ಪೊರೆಯ ಸೋಂಕು, ತಲೆಪೆಟ್ಟುಗಳು ಇತ್ಯಾದಿ ಕಾಯಿಲೆಗಳಲ್ಲೂ ಗಂಭೀರ ಸ್ವರೂಪದ ತಲೆನೋವು ಕಾಣಿಸಿಕೊಳ್ಳಬಹÀÅದು. ತಲೆನೋವಿನ ಜೊತೆಗೆ ಜ್ವರ, ವಾಂತಿ, ದೃಶ್ಯದೋಷ, ಲಕ್ವ ಇತ್ಯಾದಿ ತೊಂದರೆಗಳಿರುತ್ತವೆ.
ಇನ್ನಿತರ ಕಾರಣಗಳು
    ಕಣ್ಣಿನ, ಕಿವಿಯ, ಹಲ್ಲಿನ, ಗಂಟಲಿನ ತೊಂದರೆಗಳು, ಹೃದಯ, ಶ್ವಾಸಕೋಶ, ಮೂತ್ರಜನಕಾಂಗ, ಕತ್ತಿನ ಕಾಯಿಲೆಗಳು ಇತ್ಯಾದಿ ಎಲ್ಲ ಕಾಯಿಲೆಗಳಲ್ಲೂ ತಲೆನೋವು ಕಾಣಿಸಿಕೊಳ್ಳಬಹುದು. ಸಕ್ಕರೆಕಾಯಿಲೆಯ ಅವಘಡಗಳು, ಏರು ರಕ್ತದೊತ್ತಡ ಇತ್ಯಾದಿಗಳಲ್ಲೂ ತಲೆನೋವು ಕಾಣಿಸಿಕೊಳ್ಳುತ್ತದೆ. 
ಕಾರಣ-ದೃಢೀಕರಣ 
    ತಲೆನೋವಿನ ಗುಣ ಲಕ್ಷಣಗಳು ಮತ್ತು ಇತ್ಯಾದಿಗಳ ಬಗ್ಗೆ ರೋಗಿಯಿಂದ ಪಡೆಯುವ ಮಾಹಿತಿಗಳು, ನರ ಮಂಡಲ ವ್ಯವಸ್ಥೆಯನ್ನು ಒಳಗೊಂಡಂತೆ ದೇಹದ ಎಲ್ಲಾ ಭಾಗಗಳ ಪೂರ್ಣ ದೈಹಿಕ ಪರೀಕ್ಷೆ, ತಲೆ ಬುರುಡೆಯ ಸಿ ಟಿ, ಎಂ ಆರ್ ಐ, ಮೆದುಳು ರಕ್ತನಾಳಗಳ ಚಿತ್ರೀಕರಣ,  ರಕ್ತ, ಮಲ, ಮೂತ್ರಗಳ ಪೂರ್ಣ ಪರೀಕ್ಷೆಗಳಿಂದ ಕಾರಣವನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಈ  ಎಲ್ಲ ಪರೀಕ್ಷೆಗಳಿಂದ ಯಾವುದೇ ನ್ಯೂನತೆ ಪತ್ತೆಯಾಗದಿದ್ದಲ್ಲಿ ಮಾನಸಿಕ ಒತ್ತಡದ ತಲೆನೋವು ಎಂದು ಪರಿಗಣಿಸಲಾಗುತ್ತದೆ.
ಪರಿಹಾರ       
    ನೋವು ನಿವಾರಕ ಔಷಧಗಳು ತಾತ್ಕಾಲಿಕವಾಗಿ ತಲೆನೋವನ್ನು ನಿವಾರಿಸಿದರೂ ಕಾರಣಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಅತ್ಯಗತ್ಯ. ತಲೆನೋವು ರೋಗಿಯ ದೈನಂದಿನ ಬದುಕನ್ನೇ ಅತೃಪ್ತಗೊಳಿಸಿಬಿಡುತ್ತದೆ. ಹಲವಾರು ಕಾರಣಗಳಿಂದುಂಟಾಗಬಹುದಾದ ತಲೆನೋವಿಗೆ ನಿರ್ದಿಷ್ಟ ಕಾರಣವನ್ನು ಒಮ್ಮೆಲೇ ಕಂಡುಕೊಳ್ಳುವುದು  ವೈದ್ಯರಿಗೂ ಸುಲಭವಲ್ಲ. ನಿರಂತರ ಚರ್ಚೆ, ಆಗಿಂದಾಗ್ಗೆ ರೋಗಿಯ ಪುನರ್ ಪರೀಕ್ಷೆಗಳು ಕಾರಣವನ್ನು ಕಂಡುಕೊಳ್ಳಲು ಸಹಕಾರಿ. ವೈದ್ಯರು ರೋಗಿಗೆ ಸಮಸ್ಯೆಗಳನ್ನು ಪೂರ್ಣವಾಗಿ ವಿವರಿಸಲು ಸಮಯ ನೀಡಿ ನೀಡಲಾಗುವ ಮನ ಪುನಶ್ಚೇತನ ಚಿಕಿತ್ಸೆ ತಲೆನೋವನ್ನು ನಿವಾರಿಸುವಲ್ಲಿ ಅತ್ಯಂತ ಉಪಯೋಗಕಾರಿ.


Click here for subscription



Read more Articles..

ಚಿತ್ರಗೀತನಾವರಣ - ಡಾ||ಡಿ.ಭರತ್ ವಿಕಸನ - ಧೀರೇಂದ್ರ ನಾಗರಹಳ್ಳಿ, ಬಳ್ಳಾರಿ ಪ್ರಕೃತಿ ಮತ್ತು ನಾವು  -  ಜಯಶ್ರೀರಾಜು,ಬೆಂಗಳೂರು
ಮಮತೆ ಬೆಳೆಸಿದ ಬದುಕು - ವ್ಯೆಲೇಶ್ ಪಿ . ಕೊಡಗು ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


Share your thought