Chania

ಕನ್ನಡ ಚಿತ್ರಗೀತೆಗಳಲ್ಲಿ 

 

'ಹೆಣ್ಣು'

ನಮ್ಮ ಭಾರತ ದೇಶದಲ್ಲಿ, ಹಿಂದೂ ಸಂಸ್ಕೃತಿಯಲ್ಲಿ, ಹೆಣ್ಣಿಗೆ ಅತ್ಯಂತ ಪವಿತ್ರ ಸ್ಥಾನವಿದೆ; ಗೌರವ-ಆದ್ಯತೆ ಇದೆ. 'ಹೆಣ್ಣು' ಪ್ರೀತಿ, ವಾತ್ಸಲ್ಯ, ಕರುಣೆ, ತ್ಯಾಗ, ಆದರ್ಶ,  ಮಮತೆ, ಜವಾಬ್ದಾರಿ, ಕರ್ತವ್ಯಗಳ ಪ್ರತೀಕವಾಗಿದ್ದಾಳೆ. ಎಲ್ಲಿ ಹೆಣ್ಣಿಗೆ ಪೂಜ್ಯತೆ, ಆದ್ಯತೆಗಳಿರುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಪ್ರಾಚೀನವಾದ  ಧಾರ್ಮಿಕ ನಂಬಿಕೆಯಿದೆ. ಇಂತಹ 'ನಾರಿ'ಯನ್ನು ಕನ್ನಡ ಚಿತ್ರಗೀತೆಗಳಲ್ಲಿ ವರ್ಣಿಸಲಾಗಿರುವುದರ ಬಗೆಗೆ ಗಮನಿಸುವುದಾದರೆ-
    ನಮ್ಮ ಭಾರತವನ್ನು,
ಕರ್ನಾಟಕವನ್ನು ಮಾತೆಯಾಗಿ, ದೇವಿಯಾಗಿ ಭಕ್ತಿ ಭಾವದಿಂದ, ಗೌರವ ಅಭಿಮಾನಗಳಿಂದ
ರಾಷ್ಟಕವಿ ಕುವೆಂಪುರವರು ನೋಡಿರುವ ರೀತಿ ಯಾವಾಗಲೂ ನಮಗೆ ಮುಖ್ಯವಾಗುತ್ತದೆ.
“ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ”
(ಚಿತ್ರ : “ಮನ ಮೆಚ್ಚಿದ ಮಡದಿ” : ೧೯೬೩)

ಈ ಕವಿತೆಯನ್ನು ಡಾ|| ಪಿ.ಬಿ. ಶ್ರೀನಿವಾಸ್ ಅವರು “ಮನ ಮೆಚ್ಚಿದ ಮಡದಿ” ಚಿತ್ರದಲ್ಲಿ ಹಾಡಿದ್ದಾರೆ. ವಿಜಯ ಭಾಸ್ಕರ್ ಅವರ ಸಂಗೀತವಿದೆ.
    ಭಾರತ ಮಾತೆ-ನಮ್ಮೆಲ್ಲರಿಗೂ ಆಶ್ರಯದಾತೆ ಇವಳ ಮಗಳಾದ ಕರ್ನಾಟಕ ಮಾತೆಯ ಮಡಿಲಲ್ಲಿ ನಾವಿದ್ದೇವೆ. ಬದುಕಿ ಬಾಳುತ್ತಿದ್ದೇವೆ ಎಂಬ ಕೃತಜ್ಞತೆಯಿಂದ ವರ್ಣಿಸಿರುವ ಬಗೆ ಗಮನಾರ್ಹವಾಗಿದೆ.
    ವರಕವಿ ಬೇಂದ್ರೆಯವರು ಬರೆದ ಪದ್ಯ 'ಗಂಗಾವತರಣ' ವನ್ನು ''ಅರಿಶಿನ ಕುಂಕುಮ” ಚಿತ್ರಕ್ಕಾಗಿ ಅಳವಡಿಸಿಕೊಳ್ಳಲಾಗಿದೆ. ವಿಜಯ ಭಾಸ್ಕರ್ ಸಂಗೀತದಲ್ಲಿ ಡಾ|| ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ.
“ಇಳಿದು ಬಾ ತಾಯೇ
ಇಳಿದು ಬಾ....”
(ಚಿತ್ರ : “ಅರಿಶಿನ ಕುಂಕುಮ” ೧೯೭೦)

    ಬೇಂದ್ರೆಯವರು ಗಂಗಾನದಿಯನ್ನು ವರ್ಣಿಸಿರುವ ರೀತಿ ಅದ್ಭುತ. ದೇವನದಿ ಗಂಗೆಯನ್ನು 'ಮಾತೆ'ಯಾಗಿ ಕಂಡಿರುವ ಕವಿಯ ಭಾವನೆ ಉತ್ಕೃಷ್ಟವಾಗಿದೆ.
   ಹಿರಿಯ ಚಿತ್ರ ನಿರ್ದೆರಶಕರಾಗಿದ್ದ, ಗೀತ ರಚನೆಕಾರರಾಗಿದ್ದ ಜಿ.ವಿ.ಅಯ್ಯರ್ ರಚಿಸಿದ, ಜಿ.ಕೆ.ವೆಂಕಟೇಶ್ ಅವರ ಸಂಗೀತದೊಡನೆ ಡಾ|| ಪಿ.ಬಿ. ಶ್ರೀನಿವಾಸ್ ಅವರು ಹಾಡಿದ-
“ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ”
(ಚಿತ್ರ : “ತಾಯಿ ಕರುಳು”-೧೯೬೨)

    ಈ ಹಾಡನ್ನು ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಬರೆಯಲಾಗಿದ್ದು, ಕರ್ನಾಟಕ ರಾಜ್ಯ ಮತ್ತು ಭಾರತದೇಶದ ಐಕ್ಯತೆಯ ಅಗತ್ಯವನ್ನು ಕನ್ನಡ ಪ್ರೇಮದ ಜೊತೆಗೆ ಭಾರತದ ವಿರಾಟ್ ಸ್ಟರೂಪವನ್ನು 'ತಾಯಿ'ಯ ಭಾವನೆಯಿಂದಲೇ ವರ್ಣಿಸಿರುವುದು ವಿಶೇಷವಾಗಿ-
ಜಾನಪದ ತಜ್ಞರಾಗಿದ್ದ ಡಾ|| ಎಸ್.ಕೆ.ಕರೀಂಖಾನ್ ಗೀತರಚನೆ ಕಾರರಾಗಿ ಬರೆದ ಕೆಲವು ಗೀತೆಗಳಲ್ಲಿ “ಸ್ವರ್ಣಗೌರಿ” ಚಿತ್ರದಲ್ಲಿನ                  
“ಜಯಗೌರಿ ಜಗದೀಶ್ವರಿ
ಪಾಲಿಸೆನ್ನ ದಯಾಸಾಗರಿ”
(ಚಿತ್ರ : “ಸ್ವರ್ಣಗೌರಿ”-೧೯೬೨)

    ಅತ್ಯಂತ ಭಕ್ತಿ ಪ್ರಧಾನವಾದ ಗೀತೆಯಾಗಿದೆ. ಎಂ.ವೆಂಕಟರಾಜು ಅವರ ಸಂಗೀತದಲ್ಲಿ ಡಾ|| ಎಸ್.ಜಾನಕಿ ಯವರು ಹಾಡಿದ್ದಾರೆ. ಇದು ಮಾತೆ ಪಾರ್ವತಿ ದೇವಿಯನ್ನು ಸ್ತುತಿಸುವ ಗೀತೆಯಾಗಿದೆ. ನಂಬಿದ ಭಕ್ತರನ್ನು ಕಾಯುವಳೆಂಬ ನಂಬಿಕೆಯನ್ನು ಇಲ್ಲಿ ಕಾಣಬಹುದಾಗಿದೆ.
    ಹೆಣ್ಣು ತಾಯಿಯಾಗಿ, ತನ್ನ ಮಗುವನ್ನು ನವಮಾಸಗಳ ಕಾಲ ತನ್ನ ಗರ್ಭದಲ್ಲಿ ಧರಿಸಿ, ನಂತರ ಹೆತ್ತು ಸಾಕಿ, ಸಲಹುವ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ನಾನಾ ರೀತಿಯಲ್ಲಿ ಚಿತ್ರ ಗೀತೆಗಳಲ್ಲಿ ತಿಳಿಸಲಾಗಿದೆ.
“ಕಾಣದ ದೇವರು ಊರಿಗೆ ನೂರು
ಹುಡುಕುವರಾರು?
ಕಾಣುವ ತಾಯೇ ಪರಮ ಗುರು”
(ಚಿತ್ರ : “ಸುವರ್ಣ ಭೂಮಿ”-೧೯೬೯)

ಕು.ರಾ.ಸೀತಾರಾಮಶಾಸ್ತ್ರಿ ಅವರು ಬರೆದ ಈ ಗೀತೆಯು 'ತಾಯಿಗಿಂತ ದೇವರಿಲ್ಲ' ಎಂಬುದನ್ನು ತಿಳಿಸುತ್ತದೆ. ಡಾ|| ಪಿ.ಬಿ ಶ್ರೀನಿವಾಸ್ ಮತ್ತು ಡಾ|| ಕೆ.ಜಿ.ಜೇಸುದಾಸ್ ಅವರುಗಳು ಈ ಗೀತೆಯನ್ನು ಹಾಡಿದ್ದು ವಿಜಯ್ ಭಾಸ್ಕರ್ ಅವರ ಸಂಗೀತವಿದೆ.
“ಅಮ್ಮಾ ! ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು”
(ಚಿತ್ರ : “ಕಪ್ಪು ಬಿಳುಪು”-೧೯೬೯)

ತಾಯಿಯನ್ನು ಕುರಿತು ಉತ್ಸಾಹದಿಂದ ಹಾಡುವ ಗೀತೆಯಾಗಿ ಆರ್.ಎನ್.ಜಯಗೋಪಾಲ್ ಅವರು ಬರೆದ ಈ ಗೀತೆಗೆ ಆರ್. ರತ್ನಂ ಸಂಗೀತವಿದೆ. ಪಿ. ಸುಶೀಲಾ ಅವರು ಹಾಡಿದ್ದಾರೆ
“ನೀ ನನ್ನ ತಾಯಾಗೀ
ವಾತ್ಸಲ್ಯ ಸಿರಿ ತೋರಿದೆ”
(ಚಿತ್ರ : “ವರ್ಣಚಕ್ರ”_೧೯೮೮)

ಡಾ| ದೊಡ್ಡರಂಗೇಗೌಡ ಅವರು ಬರೆದ ಈ ಗೀತೆಗೆ ಕಲ್ಯಾಣ್- ವೆಂಕಟೇಶ್ ಸಂಗೀತ ನೀಡಿದ್ದಾರೆ. ಡಾ|| ಎಸ್ಪಿ. ಬಾಲಸುಬ್ರಹ್ಮಣ್ಯ ಅವರ ಗಾಯನವಿದೆ. ತಾಯಿಯ ಬಗೆಗಿನ ಅಕ್ಕರೆಯನ್ನು ಈ ಗೀತೆಯಲ್ಲಿ ಅಪೂರ್ವವಾಗಿ ವರ್ಣಿಸಲಾಗಿದೆ.
“ಕೈ ತುತ್ತು ಕೊಟ್ಟೊಳೆ 
ಐ ಲವ್‌ಯು ಮೈ ಮದರಿಂಡಿಯಾ
(ಚಿತ್ರ:ಕಲಿಯುಗ ಭೀಮಾ)

ತಾಯಿಯ ಮಮಕಾರದ ಸಾಕಾರವಾದ ಸಾಹಿತ್ಯ ಸಂಗೀತದ ಈ ಹಾಡು ಇದಕ್ಕೆ ಹೊರತೇನಲ್ಲ. ತನ್ನ ಮಗುವನ್ನು ಕುರಿತು ತಾಯಾಗಿ ಹೆಣ್ಣು ತೋರಿಸುವ ಅಕ್ಕರೆ, ಪ್ರೀತಿ, ವಾತ್ಸಲ್ಯಗಳನ್ನು ಚಿತ್ರ ಗೀತೆಗಳಲ್ಲಿ ಕಾಣಬಹುದಾದರೆ-
“ಮಗುವೆ ನಿನ್ನ ಹೂ ನಗೆ
ಒಡವೇ ನನ್ನ ಬಾಳಿಗೆ”
(ಚಿತ್ರ : “ಗೆಜ್ಜೆ ಪೂಜೆ”-೧೯೭೦)

ವಿಜಯನಾರಸಿಂಹರ ಈ ಗೀತ ರಚನೆಗೆ ವಿಜಯ ಭಾಸ್ಕರ್ ಸಂಗೀತವಿದೆ. ಡಾ||ಎಸ್. ಜಾನಕಿ ಅವರು ಹಾಡಿದ್ದಾರೆ. ತಾಯಿಗೆ ತನ್ನ ಮಗುವಿನ  ನಗೆಯೇ ನಿಜವಾದ ಬಾಳಿನ ಆಭರಣವೆಂದು ವರ್ಣಿತವಾಗಿದೆ.
“ಮಲಗು ಮಲಗು ಮಡಿಲಿನ ಹೂವೇ
ಮಮತೆ ಬಳ್ಳಿಯಾ ಮಲ್ಲಿಗೆಯೇ”
(ಚಿತ್ರ : “ಆನಂದ ಕಂದ”-೧೯೬೮)

ಆರ್.ಎನ್.ಜಯಗೋಪಾಲರ ಸಾಹಿತ್ಯಕ್ಕೆ ವಿಜಯ ಭಾಸ್ಕರ್ ಸಂಗೀತವಿದ್ದು, ಪಿ.ಸುಶೀಲಾ ಅವರು ಹಾಡಿದ್ದಾರೆ. ತನ್ನ ಮಡಿಲಿನ ಸುಂದರವಾದ ಕುಸುಮ ಮಗುವೆಂದೇ ಭಾವಿಸುವ ತಾಯಿಯ ವ್ಯಕ್ತಿತ್ವವಿಲ್ಲಿದೆ.
  ಹೆಣ್ಣನ್ನು ತಂಗಿಯಾಗಿಯೂ ಕಾಣುವ ಬಗೆಗಿನ ಗೀತೆಗಳಿವೆ.
“ಅಣ್ಣಾ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದೂ ಓ ! ಅಣ್ಣಾ !”
(ಚಿತ್ರ : “ಒಂದೇ ಬಳ್ಳಿಯ ಹೂಗಳು” -೧೯೬೭)

 ಡಾ|| ಎಸ್.ಜಾನಕಿಯವರು ಹಾಡಿರುವ, ಸತ್ಯಂ ಸಂಗೀತ ನೀಡಿರುವ ಈ ಗೀತೆಯನ್ನು ಗೀತಪ್ರಿಯ ಬರೆದಿದ್ದಾರೆ. ಅಣ್ಣ ತಂಗಿ ಬಾಂಧವ್ಯದ ವಿಶೇಷತೆ ಇದರಲ್ಲಿದೆ.               
“ಸಾವಿರ ಜನುಮದಲೂ  ನಮ್ಮ
ಬಂಧ ಹೀಗಿರಲಿ ಬಾಂಧವ್ಯ ತುಂಬಿರಲಿ”
( ಚಿತ್ರ : “ನ್ಯಾಯಗೆದ್ದಿತು” -೧೯೮೩)

ಚಿ. ಉದಯಶಂಕರ್ ರಚಿಸಿದ ಈ ಗೀತೆಯಲ್ಲಿ ಅಣ್ಣ ತಂಗಿಯ ಮಧುರ ಬಾಂಧವ್ಯದ ಚಿತ್ರಣವಿದೆ. ಇಳಯ ರಾಜ ಅವರ ಸಂಗೀತದಲ್ಲಿ ಡಾ||ಎಸ್.ಜಾನಕಿ ಮತ್ತು ಜಯ ಚಂದ್ರನ್ ಅವರುಗಳು ಹಾಡಿದ್ದಾರೆ.
“ತಂಗಿ ನಿನ್ನ ಮಡಿಲಿನಲ್ಲಿ ಪುಟ್ಟ ಮಗುವಿದೆ”
(ಚಿತ್ರ : “ತವರಿಗೆ ಬಾ ತಂಗಿ”-೨೦೦೩)

ಹಂಸಲೇಖ ಸಂಗೀತ-ಸಾಹಿತ್ಯಕ್ಕೆ ಮಧುಬಾಲಕೃಷ್ಣರ ಗಾಯನವಿದೆ. ತಂಗಿಯ ಮೇಲಿನ ಅಣ್ಣನ ಅಪಾರ ಪ್ರೀತಿ ವಾತ್ಸಲ್ಯದ ಸುಂದರವಾದ ಹಾಡಾಗಿದೆ.
  ಅಕ್ಕನಾಗಿ ಹೆಣ್ಣನ್ನು ಕಾಣುವ ಬಗೆಗಿನ ಗೀತೆಗಳಾದರೆ
“ಅಕ್ಕಯ್ಯ....ಅಕ್ಕಯ್ಯ.... ಏನೇ ಇದು ಅನ್ಯಾಯ”
(ಚಿತ್ರ : “ಉಪಾಸನೆ”-೧೯೭೪)

 ವಿಜಯನಾರಸಿಂಹ ಅವರ ಈ ಗೀತೆಯನ್ನು ವಾಣಿಜಯರಾಂ ಅವರು ವಿಜಯ್ ಭಾಸ್ಕರ್ ಸಂಗೀತದಲ್ಲಿ ಹಾಡಿದ್ದಾರೆ. ತಂಗಿಯೊಬ್ಬಳು ತನ್ನ ಅಕ್ಕನನ್ನೂ ತುಂಟತನದಿಂದ ಪ್ರಶ್ನಿಸುವ, ಗೀತೆ ಆಗಿದೆ.
“ಅಕ್ಕ ಕೇಳೇ ಅಕ್ಕ.... ನನ್ನ ಮುದ್ದು ಅಕ್ಕ”
(ಚಿತ್ರ : “ಅಕ್ಕ”-೧೯೯೭)

ವಿ.ಮನೋಹರ್ ಸಾಹಿತ್ಯ-ಸಂಗೀತದಲ್ಲಿ ಅಕ್ಕ ತಮ್ಮನ ಬಾಂಧವ್ಯವನ್ನು ಕುರಿತು ರಾಜೇಶ್ ಕೃಷ್ಣನ್ ಹಾಡಿದ್ದಾರೆ.,
ಹೆಣ್ಣನ್ನು ವೀರನಾರಿ ಆಗಿ ತೋರಿದ ಪರಿಯಲ್ಲಿ ಚಿ.ಉದಯಶಂಕರ್ ಬರೆದ,  ಡಾ||ಪಿ.ಬಿ. ಶ್ರೀನಿವಾಸ್ ಹಾಡಿದ ವಿಜಯ ಭಾಸ್ಕರ್ ಸಂಗೀತದ 'ನಾಗರ ಹಾವು” ಚಿತ್ರದಲ್ಲಿನ ಒನಕೆ ಓಬವ್ವ ಪ್ರಸಂಗವು ಅತ್ಯುತ್ತಮ ಉದಾಹರಣೆ ಆಗಿದೆ.
“ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ”
“ಕೈಗೆ ಸಿಕ್ಕಿದ ಒನಕೆ ಹಿಡಿದಳು
ವೀರಗಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ವೀರ ವನಿತೆ ಆ ಓಬವ್ವ
ದುರ್ಗವು ಮರೆಯದ ಓಬವ್ವ” 

 


Click here for subscription



Read more Articles..

ಚಿತ್ರಗೀತನಾವರಣ - ಡಾ||ಡಿ.ಭರತ್ ವಿಕಸನ - ಧೀರೇಂದ್ರ ನಾಗರಹಳ್ಳಿ, ಬಳ್ಳಾರಿ ಪ್ರಕೃತಿ ಮತ್ತು ನಾವು  -  ಜಯಶ್ರೀರಾಜು,ಬೆಂಗಳೂರು
ಮಮತೆ ಬೆಳೆಸಿದ ಬದುಕು - ವ್ಯೆಲೇಶ್ ಪಿ . ಕೊಡಗು ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


Share your thought