Chania

ಹಿಂದಿನ ವ್ಯವಸಾಯ ಪದ್ಧತಿಕೊಡಗಿನ ಸುಂದರ ಪರಿಸರದಲ್ಲಿ, ಟ್ರ‍್ಯಾಕ್ಟರ್-ಟಿಲ್ಲರ್ಗಳು ಕಾಲಿಟ್ಟಿರದ ಆ ಕಾಲದಲ್ಲಿ, ವ್ಯವಸಾಯ ಎಂಬುದು ಅದೆಷ್ಟು ಚಂದದ ಕಾರ್ಯಕ್ರಮವಾಗಿತ್ತು ಎಂದು ತಿಳಿಯಬೇಕಾದರೆ ಈ ಲೇಖನವನ್ನು ಓದಿರಿ.
    ನಾಳಿನ ಕಾರ್ಯಕ್ರಮದ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ ಅಪ್ಪ-ಅಮ್ಮ ನಿದ್ರೆಗೆ ಜಾರಿದರು. ಅದಾಗಲೇ ಒಂದು ನಿದ್ದೆ ಮುಗಿಸಿ, ಎಚ್ಚರವಾದ ನನ್ನೆದೆಯೊಳಗೆ ತಳಮಳ ಆರಂಭವಾಯಿತು.  ನಿನ್ನೆ ಬೆಳಿಗ್ಗೆ ಅಮ್ಮ ಪೈರು ಕೀಳಲೆಂದು ನಮ್ಮನ್ನು ಮನೆಯಲ್ಲಿ ಬಿಟ್ಟು ಯಾಕಾಲಿಗೆ (ಅಗೆಗದ್ದೆಗೆ) (ಕೊಡವ ಭಾಷೆಯಲ್ಲಿ ಯಾಕ) ತೆರಳಿದ್ದರು. ಆಗ ನಾವು ಮೂವರು ಸೇರಿ ಮಾಡಿದ ಕಿತಾಪತಿಯಿಂದ ನಾಳೆ ಸಿಗಲಿರುವ ಬಿಸಿ ಬಿಸಿ ಕಜ್ಜಾಯದ ನೆನಪು ಮೈಯಲ್ಲಿ ನಡುಕ ತರಿಸುತ್ತಿತ್ತು. 
    ಮಾರನೆಯ ದಿನ ಬೆಳಿಗ್ಗೆ ಆರು ಗಂಟೆಯ ಸಮಯದಲ್ಲಿ, ಮಲಗಿದ್ದ ನಮ್ಮ ಬೆನ್ನಿನ ಮೇಲೆ ಅಮ್ಮನ ಕೈಯಲ್ಲಿ ಇದ್ದ ತೆಳುವಾದ ಕೋಲು ಹರಿದಾಡಿದಾಗ, ಉರಿ ತಾಳಲಾರದೆ ಎಡಗಡೆ ಬಲಗಡೆ ಏನೂ ನೋಡದೆ ಮಂಚದಿಂದಿಳಿದು, ನಾನು, ನನ್ನ ತಮ್ಮ ಹೊರಗೆ ಓಡಿದೆವು. ಚಿಕ್ಕವಳಾದ ತಂಗಿಯು ಎರಡು ಕಜ್ಜಾಯ ಸಿಕ್ಕಿದ ಕೂಡಲೆ, `ಅನ್ನ ನಂಗೆ ಕೊತ್ತಿದ್ದು; ರಮೇಸನ್ನ ಅನ್ನಂಗೆ ತೋರ್ಸಿದ್ದು ಅವನೇ' ಎಚಿದು
ತೊದಲಿಬಿಟ್ಟಳು. 
ಅಳುತ್ತಿದ್ದ ತಂಗಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ನಮ್ಮನ್ನು ಹಿಡಿದು ಪ್ರಶ್ನೆ ಕೇಳಲೆಂದು ನಮ್ಮ ಬಳಿಗೆ ಅಮ್ಮನ ಆಗಮನ. ಅಮ್ಮನ ಕೈಗೆ ಸಿಗದಂತೆ ಪೆಟ್ಟು ತಪ್ಪಿಸಿಕೊಳ್ಳುವತ್ತ ನಮ್ಮಿಬ್ಬರ ಗಮನ. (ನಮ್ಮ ಅಮ್ಮನ ಅಸಹಾಯಕ ಸ್ಥಿತಿಯನ್ನು ವಿವರಿಸಲಷ್ಟೇ ಈ ವಿವರಗಳನ್ನು ಸೇರಿಸಿರುವೆ. ಈ ಘಟನೆಯಲ್ಲಿ ನಾವು ಕಲಿತ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಏನನ್ನಾದರೂ ಬಳಸುವ ಮೊದಲು, ಅದನ್ನು ಏತಕ್ಕಾಗಿ ತಂದಿದ್ದಾರೆ ಎಂದಷ್ಟೇ ಅಲ್ಲದೇ, ಮನೆಯಲ್ಲಿ ಇರುವ ಆಹಾರ ಅಥವಾ ಬೇರೆ ಪದಾರ್ಥಗಳನ್ನು ಬಳಸುವ ಮುನ್ನ ಕೂಡ ಇನ್ನೂ ಎಷ್ಟು ಜನರಿಗೆ ಇದು ತಲುಪುವ ಅಗತ್ಯವಿದೆ ಎಂಬುದನ್ನು ನಾವೆಲ್ಲರೂ ಯೋಚಿಸುವಂತೆ ಮಾಡಿದ ಈ ಅನುಭವ ಜನುಮವಿರುವವರೆಗೂ ಮರೆಯಲಾಗದು)
      ಅಂದಿನ ದಿನಗಳಲ್ಲಿ ಕೊಡಗಿನ ಜನರು ಬೇಸಿಗೆಯಲ್ಲಿ ನೀರಿಗೆ ಹತ್ತಿರದ ಗದ್ದೆಯಲ್ಲಿ ತರಕಾರಿ ತೋಟಗಳನ್ನು ಮಾಡಿರುತ್ತಿದ್ದರು. ಗದ್ದೆಯ ಏರಿಯ ಮೇಲೆ ಬೀನ್ಸ್ ಮತ್ತಿತರ ತರಕಾರಿಗಳನ್ನು, ಮಳೆಗಾಲ ಕಡಿಮೆಯಾದ ಒಡನೆಯೇ ಬೆಳೆಯಲು ಉಪಕ್ರಮಿಸುತ್ತಿದ್ದರು. ನಾಲ್ಕು ಯಾ ಮೂರು ದೊಡ್ಡ ಏರಿ ಸೇರುವ ಜಾಗದಲ್ಲಿ ನಾಲ್ಕು ಮರದ ಕವೆಗಳನ್ನು ನಿಲ್ಲಿಸಿ, ಚಪ್ಪರ ಹಾಕಿ ಅದಕ್ಕೆ ಸಿಹಿಗುಂಬಳ, ಸೋರೇಕಾಯಿ, ಬೂದು ಕುಂಬಳ, ಪಡವಲಕಾಯಿ ಹೀಗೆ ವರ್ಷ ಪೂರ್ತಿ ಮನೆಗೆ ಬೇಕಾದ ತರಕಾರಿಗಳನ್ನು ಬೆಳೆಯುತ್ತಿದ್ದರು. 
    ಈಗಲೂ ಸಹ ಕೊಡಗಿನ ಕೆಲವು ಸ್ಥಳಗಳಲ್ಲಿ ಉದಾಹರಣೆಗೆ ಭಾಗಮಂಡಲ, ಸೂರ್ಲಬ್ಬಿ, ಕಾಲೂರು, ಮಾಂದಲಪಟ್ಟಿಯಂತಹ ಕಡೆಗಳಲ್ಲಿ ಈ ರೀತಿಯ ತರಕಾರಿಗಳನ್ನು ಬೆಳೆಯುವುದು ಸಾಮಾನ್ಯವಾಗಿದೆ. ನಮ್ಮ ಬಳಕೆಯ ನಂತರ ಉಳಿದ ತರಕಾರಿಗಳನ್ನು ಮಾರಾಟ ಮಾಡುವ ಅಥವಾ "ಬೆಳೆದ ಫಲ ನೀಡಿ ಕರ್ಮ ಕಳೆಯಿರಿ" ಎಂಬ ಮಾತಿನಂತೆ ಕೆಲವರಿಗೆ ಉಚಿತವಾಗಿ ನೀಡುವುದು ಹೀಗೆ ಮಾಡುತ್ತಿದ್ದರು. ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆದರೂ ಕ್ಯಾರೆಟ್‌ನ್ನು ಸಾಧಾರಣವಾಗಿ ಯಾರೂ ಬೆಳೆಯುತ್ತಿರಲಿಲ್ಲ. ಈಗ ಕೂಡ ಕ್ಯಾರೆಟ್‌ನ್ನು ಕೊಡಗಿನಲ್ಲಿ ಬೆಳೆಯುವುದಿಲ್ಲ ಎನಿಸುತ್ತದೆ. ಹಾಗಾಗಿ ಕ್ಯಾರೆಟ್ ಎಂಬ ತರಕಾರಿ ಬಳಸಿ ತಯಾರಿಸಿದ ಪದಾರ್ಥಗಳಿಗೆ ವಿಶೇಷವಾದ ಮಹತ್ವವಿರುತ್ತಿತ್ತು. ಅದೇ ಕಾರಣದಿಂದಾಗಿ ಅಮ್ಮನ ಕೈಯಿಂದ ನಮಗೆ ವಿಶೇಷವಾದ ಕಜ್ಜಾಯ ಸಿಕ್ಕಿತು.
    ಇನ್ನು ಅಪ್ಪನ ಸಹಾಯ ಪಡೆಯೋಣವೆಂದು ನೋಡಿದರೆ ಮನೆಯ ಮುಂಬಾಗಿಲಿನಿಂದ ಕಣ್ಣಿಗೆ ಕಾಣುವ ದೂರದಲ್ಲಿರುವ ಗದ್ದೆಯಲ್ಲಿ ಕೆಂಜು ಎಂಬ ಕೆಂಪು ಬಣ್ಣದ, ರಾಮು ಎಂಬುವ ಕರಿ ಬಣ್ಣದ ಹಳ್ಳಿಕಾರ್ ತಳಿ ಹಾಗೂ ಕೊಡಗಿನ ಸ್ಥಳೀಯ ತಳಿಯ ಮಿಶ್ರಿತವಾದ ಬಲವಾದ ಹೋರಿಗಳನ್ನು ಕಟ್ಟಿಕೊಂಡು ಮುಂದಿನ ಆರು (ಹೇರು) ಹಿಡಿದು ಸಾಲು ಹೊಡೆಯುವ ಕೆಲಸದಲ್ಲಿ ಮಗ್ನರಾಗಿದ್ದಾರೆ, ಅವರ ಹಿಂದೆ ಸುಬ್ಬಯ್ಯನವರು, ಮುತ್ತಪ್ಪನವರು, ಚಾಮಿಯವರು,  ಪೂವಣ್ಣನವರು  ಅಲ್ಲದೆ ನಮ್ಮ ಭತ್ತದ ಕೋವಿನ ಇನ್ನೆರಡು ಆರುಗಳು ನಮ್ಮಗದ್ದೆಯ ದೊಡ್ಡ ನಾಟಿಗಾಗಿ ದೊಡ್ಡ ಗದ್ದೆಯನ್ನು ಒಟ್ಟು ಏಳು ಆರುಗಳ ಸಹಾಯದಿಂದ ಉಳುತ್ತಿದ್ದಾರೆ. ಅವರ ಸಾಲಿನ ಹಿಂದೆ ಬೆಳ್ಳಕ್ಕಿಗಳು, ಕಾಗೆಗಳು, ಕುರುಳಿ ಪಕ್ಷಿಗಳು ಹಾರಾಡುತ್ತಾ ಹುಳು ಹಪ್ಪಟೆಗಳನ್ನು ಹಿಡಿದು ಆನಂದದಿಂದ ತಿನ್ನುತ್ತಾ ಅತ್ತಿತ್ತ ಕುಪ್ಪಳಿಸುತ್ತಿವೆ. 
    ಬೆಳಿಗ್ಗೆ ಐದು ಗಂಟೆಯ ವೇಳೆಗೆ ಎದ್ದು, ಬೆಲ್ಲ ಬಳಸಿ ತಯಾರಿಸಿದ ಖಾಲಿ ಕಾಫಿ ಕುಡಿದು, ಎತ್ತುಗಳನ್ನು ಕೊಟ್ಟಿಗೆಯಿಂದ ಬಿಚ್ಚಿಕೊಂಡು ಗದ್ದೆಗೆ ಹೋದವರು, ಅಕ್ಕಪಕ್ಕದ ಗದ್ದೆಯ ರೈತರು ಸಹ ಅಂದು ನಮ್ಮ ಗದ್ದೆಯಲ್ಲಿ ೧೧ ಗಂಟೆಯವರೆಗೆ ಉಳುಮೆ ಮಾಡಿ, ಆ ನಂತರ ಅಂದು ಉಳುಮೆ ಮಾಡಿದ ಗದ್ದೆಗಳಲ್ಲಿ ನಾಟಿ ಕೂಡುವವರೆಗೆ ನಾಟಿ ಮಾಡಿ, ನಂತರ ಅವರವರ ಮನೆಗೆ ಹೋಗುವರು. ಹಿಂದೆ ಕೊಡಗಿನಲ್ಲಿ ಸಾಧಾರಣವಾಗಿ ಎಲ್ಲಾ ರೈತರು ಬೆಳಿಗ್ಗೆ ಐದು ಗಂಟೆಯ ವೇಳೆಗೆ ಮೊದಲೇ ನಿರ್ಧರಿತ ಗದ್ದೆಯಲ್ಲಿ ಆರು ಕಟ್ಟಲು ಹೋಗಿ, ೧೧:೦೦ ಗಂಟೆಯ ತನಕ ಉಳುಮೆ ಮಾಡಿ, ನಂತರ ಸಂಜೆ ನಾಟಿ ಕೂಡುವ ತನಕ ನಾಟಿ ಮಾಡುತ್ತಿದ್ದರು.
    ಬೆಳಿಗ್ಗೆ ೧೧:೦೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ, ಅಪ್ಪಿತಪ್ಪಿ ಕೆಲವೊಮ್ಮೆ ಸಂಜೆ ಆರು ಗಂಟೆಯ ತನಕವಾದರೂ ಸರಿಯೆ, ನಾಟಿ ಮುಗಿಸಿಯೇ ಏರಿ(ತೆವರಿಗೆ) ಹತ್ತಬೇಕು. ಇದು ಪೂರ್ಣ ದಿನದ ಮುಯ್ಯಾಳು, ಇನ್ನು ಅರ್ಧ ದಿನದ ನಾಟಿ ಮುಯ್ಯಾಳು ಎಂದರೆ  ಊಟದ ಬಳಿಕ ಬಂದು ನಾಟಿಗೆ ಸೇರಿಕೊಳ್ಳುವುದು. ಮುಯ್ಯಾರು + ಮುಯ್ಯಾಳು ಎಂದರೆ ಬೆಳಿಗ್ಗೆ ಐದು ಗಂಟೆಯ ಸಮಯದಲ್ಲಿ ತಮ್ಮ ಉಳುವ ಪರಿಕರಗಳ ಜೊತೆಗೆ ತಮ್ಮದೇ ಎತ್ತು ಅಥವಾ ಎಮ್ಮೆ ಕೋಣಗಳನ್ನು ಹೊಡೆದುಕೊಂಡು ಬಂದು ೧೧:೦೦ ಗಂಟೆಯವರೆಗೆ ಉಳುಮೆ ಮಾಡಿ ನಂತರ ಸಂಜೆಯವರೆಗೆ ನಾಟಿ ಮಾಡುವುದಾಗಿತ್ತು. 
    ಈಗಿನಂತೆ ಎಲ್ಲದಕ್ಕೂ ಹಣ ಚೆಲ್ಲುವ, ಹೊರ ಜಿಲ್ಲೆಯ ರಾಜ್ಯಗಳ ಜನಗಳನ್ನು ಹಣ ಕೊಟ್ಟು ಬಳಸಿಕೊಳ್ಳುವ ಪರಿಪಾಠ ಆಗ ಇರಲಿಲ್ಲ. ಮುಯ್ಯಿಗೆ ಮುಯ್ಯಿ ಎಂಬಂತೆ ಎಲ್ಲವೂ ಇದೇ ಆಧಾರದ ಮೇಲೆ ನಡೆಯುತ್ತಿದ್ದ ಕಾಲವದು. ಈಗಿನಂತೆ ಎಲ್ಲವನ್ನೂ ಹಣದಲ್ಲಿ ಅಳೆಯುತ್ತಿರಲಿಲ್ಲ. ಪರೋಪಕಾರವೇ ಜೀವನವೆಂದು, ನೀ ನನಗಿದ್ದರೆ ನಾ ನಿನಗೆ ಎಂಬಂತೆ ಇಡೀ ಊರಿನ ಜನರು ನಮಗಾಗಿ; ನಾವು ಇಡೀ ಊರಿನ ಜನರ ಮನೆ ಮನೆಯ ಕೆಲಸಕ್ಕಾಗಿ ಎಂಬುದನ್ನು ಅರಿತುಕೊಂಡು ಪರಸ್ಪರ ಎಲ್ಲಾ ವಿಚಾರದಲ್ಲೂ ಸಹಕಾರದಿಂದ ಬದುಕುತ್ತಿದ್ದ ಕಾಲವದು. ನಮ್ಮ ಕೂಗಾಟ, ಅಳು, ಅಮ್ಮನ ಧ್ವನಿ ಕೇಳಿದ ಪಕ್ಕದ ಮನೆಯ ಹಾಗೂ ಪಕ್ಕದ ಗದ್ದೆಯ ಚೋಂದು ಅಕ್ಕಯ್ಯ ಅಡುಗೆಗೆ ಸಹಾಯ ಮಾಡಲೆಂದು ನಮ್ಮ ಮನೆಗೆ ಬಂದವರು ಏನಾಯಿತು ಎಂದು ನಮ್ಮ ಅಮ್ಮನ ಬಳಿ ಕೇಳಿದ್ದಾರೆ. 
    ‘ಅಲ್ಲಕ್ಕ, ಮನೆಯ ತರಕಾರಿಗಳ ಜೊತೆಗೆ ಕೂಟು ಕರಿಗೆ ಹಾಕಲೆಂದು ಮತ್ತು ರೊಟ್ಟಿಗೆ ಪಲ್ಯ ಮಾಡಲೆಂದು ತಂದಿಟ್ಟಿದ್ದ ಕೇಜಿಗಟ್ಟಲೆ ಕ್ಯಾರೇಟ್ಟನ್ನು ಒಂದೂ ಬಿಡದೆ ತಿಂದು ಮುಗಿಸಿದ್ದಾರೆ ಈ ಮಕ್ಕಳು. ಈಗ ಕೂಟು ಕರಿಗೆ ಏನಾದರಾಗಲಿ; ಪಲ್ಯ ಏನು ಮಾಡಲಿ!' ಎಂದು ಹೇಳಿದ್ದಾರೆ.
       `ಅಷ್ಟೇ ತಾನೆ!' ಎಂದು ಚೋಂದು ಅಕ್ಕಯ್ಯ, ತಮ್ಮ ಮನೆಯಲ್ಲಿ ಅವರ ಮನೆಯ ದೊಡ್ಡ ನಾಟಿಗೆಂದು ತಂದಿರಿಸಿದ್ದ ಕ್ಯಾರೇಟ್ ಜೊತೆಗೆ ಇನ್ನೂ ಒಂದಷ್ಟು ತರಕಾರಿಗಳನ್ನು ತಂದಿದ್ದಾರೆ. ಅಲ್ಲಿಗೆ ನಾವು ಬಚಾವ್ ಆದೆವು. ಅಡುಗೆ ಕೆಲಸದ ನಡುವೆ ನಾವು ಮೆಲ್ಲಗೆ ಶಾಲೆಗೆ ಹೊರಡಲು ತಯಾರಾಗಲು ನೋಡಿದರೆ, `ಇಂದು ಶಾಲೆಗೆ ಹೋಗುವುದು ಬೇಡ. ಗದ್ದೆಯಲ್ಲಿ ಪೈರು ಹೊರುವ ಕೆಲಸ ಇದೆ' ಎಂದು ಅಮ್ಮನ ಧ್ವನಿ ಕೇಳಿಸಿತು. ಅದರ ಜೊತೆಗೆ ಹುಲ್ಲು ಮುಂಡದ ಬಳಿ ನಿನ್ನೆ ರಾತ್ರಿಯೇ ಕಿತ್ತು ಮಳೆ ಬೀಳದಂತೆ ಇಟ್ಟಿರುವ ಹುಲ್ಲಿನ ಕಂತೆಗಳನ್ನು ಹೊತ್ತು ತರಲೆಂದು ಅಮ್ಮ ನಡೆದರು. ಬೆಳಗಿನ ತಿಂಡಿ, ಬಿಸಿ ಕಾಫಿಯ ಜೊತೆಗೆ ದನಗಳಿಗೆ ಮೇವು ಎಂದು ಒಣಹುಲ್ಲಿನ ಕಂತೆಗಳನ್ನು ಹಿಡಿದು ನಮ್ಮ ದಂಡು ದೊಡ್ಡಗದ್ದೆಯತ್ತ ಸಾಗಿತು. 


Click here for subscription



Read more Articles..

ಚಿತ್ರಗೀತನಾವರಣ - ಡಾ||ಡಿ.ಭರತ್ ವಿಕಸನ - ಧೀರೇಂದ್ರ ನಾಗರಹಳ್ಳಿ, ಬಳ್ಳಾರಿ ಪ್ರಕೃತಿ ಮತ್ತು ನಾವು  -  ಜಯಶ್ರೀರಾಜು,ಬೆಂಗಳೂರು
ಮಮತೆ ಬೆಳೆಸಿದ ಬದುಕು - ವ್ಯೆಲೇಶ್ ಪಿ . ಕೊಡಗು ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


Share your thought